ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಹುದ್ದೆಗೆ ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಕಾಂಗ್ರೆಸ್ ಎಂಎಲ್ ಸಿ ನಸೀರ್ ಅಹ್ಮದ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ನ ಮುಖಂಡ ಬಸವರಾಜ ಹೊರಟ್ಟಿ ಇಂದು ಬೆಳಗ್ಗೆ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಸಚಿವ ಎಂ.ಟಿ.ಬಿ. ನಾಗರಾಜ್, ಹಿರಿಯ ಸದಸ್ಯರಾದ ಆಯನೂರು ಮಂಜುನಾಥ್, ನಾರಾಯಣಸ್ವಾಮಿ, ಭಾರತಿ ಶೆಟ್ಟಿ, ಜೆಡಿಎಸ್ ಸದಸ್ಯರಾದ ಎಚ್.ಎಂ.ರಮೇಶ್ ಗೌಡ, ಅಪ್ಪಾಜಿಗೌಡ, ಶ್ರೀಕಂಠೇಗೌಡ ಮತ್ತಿತರರು.ಜೊತೆಗಿದ್ದರು.
ಇತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್ ಎಂಎಲ್ ಸಿ ನಸೀರ್ ಅಹ್ಮದ್ ಅವರೂ ಕೂಡ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಶಾಸಕ ಜಮೀರ್ ಅಹ್ಮದ್, ಕಾಂಗ್ರೆಸ್ ನಾಯಕ ಬಿಕೆ ಹರಿ ಪ್ರಸಾದ್ ನಾರಾಯಣಸ್ವಾಮಿ ಸೇರಿದಂತೆ ಕಾಂಗ್ರೆಸ್ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.










