ಮುಂಬೈ : ಕಂಗನಾ ರಣಾವತ್ ರೈತರ ಪ್ರತಿಭಟನೆಯನ್ನು ಪ್ರತ್ಯೇಕತಾವಾದಿ ಗುಂಪಿಗೆ ಹೋಲಿಸಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದಾಗಿ ನಟಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕಂಗನಾ ಇಂದು ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಕಂಗನಾ ರಣಾವತ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಖಾರ್ ಪೊಲೀಸ್ ಠಾಣೆಗೆ ಆಗಮಿಸಿದರು. ಸಿಖ್ ಸಂಘಟನೆಯೊಂದು ನೀಡಿದ ದೂರಿನ ಮೇರೆಗೆ ಕಳೆದ ತಿಂಗಳು ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಡಿಸೆಂಬರ್ 22 ರಂದು ಖಾರ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಕಂಗನಾ ಪರ ವಕೀಲರು ಮುಂಬೈ ಹೈಕೋರ್ಟ್ ಗೆ ತಿಳಿಸಿದ್ದರು. ಬುಧವಾರ ಹಾಜರಾಗಲು ಸಾಧ್ಯವಾಗದ ಹಿನ್ನೆಲೆ ಬೇರೆ ದಿನ ನಿಗದಿ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಇಂದು ವಿಚಾರಣೆಗೆ ಆಗಮಿಸಿದ್ದಾರೆ.
ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಾಗ, ಕಂಗನಾ ಅದರ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಸಂದರ್ಭದಲ್ಲಿ, ನಟಿ ಸಿಖ್ ಸಮುದಾಯದ ವಿರುದ್ಧ ಟೀಕೆಗಳನ್ನು ಮಾಡಿದರು. ಸಿಖ್ ಸಮುದಾಯಕ್ಕೆ ನೋವುಂಟು ಮಾಡುವ ಕೆಲವು ಪದಗಳನ್ನು ಬಳಸಿದ್ದರು.