ವಿಶ್ವಾದ್ಯಂತ ತೆರೆಕಂಡ ಕೆಜಿಎಫ್-2 ; ಥಿಯೇಟರ್ ಗಳತ್ತ ಮುಗಿಬೀಳುತ್ತಿದ್ದಾರೆ ಅಭಿಮಾನಿಗಳು…

67
firstsuddi

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಇಂದು ವಿಶ್ವಾದ್ಯಂತ ತೆರೆ ಕಂಡಿದೆ. ಕೆಜಿಎಫ್-2 ಸಿನಿಮಾ ನೋಡಲು ಚಿತ್ರಮಂದಿರಗಳತ್ತ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ರಾಜ್ಯದ 550ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆಕಂಡಿದೆ. ವಿಶ್ವದಾದ್ಯಂತ ಒಟ್ಟು 12 ಸಾವಿರ ಪರದೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನಗೊಳ್ಳಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಹಲವು ಭಾಷೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರದರ್ಶನಗೊಳ್ಳುತ್ತಿದೆ. 

ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 5 ಕಡೆಗಳಲ್ಲಿ ಫಸ್ಟ್ ಶೋ ಆರಂಭವಾಗಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿದೆ. ಅಲ್ಲದೇ ಪ್ರಸನ್ನ ಥಿಯೇಟರ್ ಮುಂದೆ ಬೃಹತ್ ಕಟೌಟ್ ಗಳು ತುಂಬಿ ತುಳುಕಾಡುತ್ತಿದೆ. ಮತ್ತೊಂದೆಡೆ ವೀರೇಶ್ ಥಿಯೇಟರ್ ನಲ್ಲಿ ಕೂಡ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭವಾಗಿದ್ದು, ಸಿನಿಮಾ ನೋಡಲು ಅಭಿಮಾನಿಗಳಿಂದ ನುಕ್ಕುನುಗ್ಗಲಾಗಿದೆ.

ಬಳ್ಳಾರಿಯಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಮೊದಲ ಶೋ ಆರಂಭವಾಗಿದೆ. ಏಕಕಾಲಕ್ಕೆ ಬಳ್ಳಾರಿಯ ಆರು ಚಿತ್ರ ಮಂದಿರಗಳಲ್ಲಿ ಕೆಜಿಎಫ್ ಚಾಪ್ಟರ್ -2 ಸಿನಿಮಾ ರಿಲೀಸ್ ಆಗಿದೆ. ಯಶ್ ಅಭಿಮಾನಿಗಳು, ನೆಚ್ಚಿನ ನಟನನ್ನು ತೆರೆ ಮೇಲೆ ಕಂಡು ಕುಣಿದು ಕುಪ್ಪಳಿಸಿದರು. ಅಲ್ಲದೆ, ಸಿನಿಮಾ ಮಂದಿರಗಳೆದುರು ಪಟಾಕಿ ಸಿಡಿಸಿ ಸ್ವಾಗತಿಸಿದರು.

ಇನ್ನೂ ರಾಮನಗರದ ಶಾನ್ ಚಿತ್ರಮಂದಿರದಲ್ಲಿಯೂ ಕೆಜಿಎಫ್ ಚಾಪ್ಟರ್ 2 ಸಿನೆಮಾ ಬಿಡುಗಡೆಯಾಗಿದೆ. ಬೆಳಗ್ಗೆ 7 ಗಂಟೆಗೆ ಸಿನೆಮಾದ ಮೊದಲ ಶೋ ಪ್ರದರ್ಶನ ಕಂಡಿದ್ದು, ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.