ಕೊಡಗು : ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಮನೆ ಮೇಲೆ ಎಸಿಬಿ ದಾಳಿ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೇರಿಯ ಆನಂದ್ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಕರೆ ಮಾಡಿ, ನಿಮ್ಮ ಮೇಲೆ ಎಸಿಬಿ ರೈಡ್ ಆಗುತ್ತೆ. ನೀವು ಒಂದು ಕೋಟಿ ರೂ ಹಣ ಕೊಟ್ಟರೆ ರೈಡ್ ಆಗಲ್ಲ. ನನ್ನ ಅಕೌಂಟ್ ಗೆ ಹಣ ಹಾಕಿ ಎಂದು ಹೆದರಿಸಿದ್ದ. ಈ ಕುರಿತು ಶಾಸಕರು ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ದೂರು ನೀಡಿದ್ದು, ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಶಾಸಕರಿಗೆ ಕರೆ ಮಾಡಿ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಂತರ ರೈಲು ಮೂಲಕ ಬೆಂಗಳೂರು ಕಡೆಗೆ ವಾಪಸ್ಸಾಗುತ್ತಿರುವುದು ತಿಳಿದಿದೆ. ಈ ವೇಳೆ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಆನಂದ್ ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.










