ಶ್ರದ್ಧೆ, ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಶಿಕ್ಷಣವಂತರಾಗಲು ಸಾಧ್ಯ : ಜಿ.ವೆಂಕಟೇಶ್.

72
firstsuddi

ಚಿಕ್ಕಮಗಳೂರು : ವಿದ್ಯೆ ಸಾಧಕರ ಸೊತ್ತು, ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಶಿಕ್ಷಣವಂತರಾಗಲು ಸಾಧ್ಯವಾಗುತ್ತದೆ ಎಂದು ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಜಿ.ವೆಂಕಟೇಶ್ ಹೇಳಿದರು.

ಆಲ್ದೂರಿನ ಜಾಮಿಯಾ ಶಾದಿ ಮಹಲ್‍ನಲ್ಲಿ ಫಾತಿಮಾ ಇಸ್ಥೇಮಾ ಸಮಿತಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿ ವಿದ್ಯಾವಂತರಾಗಿ ಹೊರಹೊಮ್ಮಬೇಕಾದರೆ ಅವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಹಾಗಾದಾಗ ಮಾತ್ರ ಶಿಕ್ಷಣವಂತರಾಗಲು ಸಾಧ್ಯವಾಗುತ್ತದೆ ಎಂದರು.

ಫಾತಿಮಾ ಇಸ್ಥೇಮಾ ಸಮಿತಿಯ ನಿರ್ದೇಶಕಿ ಅತಿಯಾ ಪರ್ವೀನ್ ಮಾತನಾಡಿ ಬಡತನವೆಂಬ ರೋಗಕ್ಕೆ ಶಿಕ್ಷಣ ದಿವ್ಯೌಷಧ, ವಿದ್ಯಾವಂತರಾದರೆ ಮಾತ್ರ ಸಮಾಜದಲ್ಲಿ ಗೌರವ, ಸ್ಥಾನಮಾನ ದೊರೆಯುತ್ತದೆ ಹಾಗಾಗಿ ಎಲ್ಲರೂ ಶಿಕ್ಷಣವಂತರಾಗಬೇಕು ಎಂದು ಸಲಹೆ ನೀಡಿದರು.

ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ 16 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಉಮೈಸಾರಾ ಮತ್ತು 9 ಚಿನ್ನದ ಪದಕ ಗಳಿಸಿದ ಅಮ್ರೀನ್ ತಾಜ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ 25 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು, ನಿವೃತ್ತ ಶಿಕ್ಷಕಿ ಅಸ್ಮತ್ ಉನ್ನೀಸ ಅಧ್ಯಕ್ಷತೆ ವಹಿಸಿದ್ದರು. ನಾಹೀದ ಇಕ್ಬಾಲ್ ಸಾಬ್, ಇಕ್ಬಾಲ್ ಖಮರ್ ಉಪಸ್ಥಿತರಿದ್ದರು.