ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕಳೆದ ಎರಡು ದಿನಗಳ ಕಾಲ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.
ರಾಹುಲ್ ಗಾಂಧಿ ಜೂನ್ 13 ಹಾಗೂ 14ರಂದು ಎರಡು ದಿನ ವಿಚಾರಣೆಗೆ ಹಾಜರಾಗಿದ್ದರು. ಇನ್ನೂ ಪ್ರಶ್ನೆಗಳು ಪೂರ್ಣಗೊಳ್ಳದ ಕಾರಣ ಇಂದು ಕೂಡ ವಿಚಾರಣೆ ಎದುರಿಸಲಿದ್ದಾರೆ. ರಾಹುಲ್ ಗಾಂಧಿ ಅವರು ನಿನ್ನೆ 11ಗಂಟೆಗೆ ಇಡಿ ಕಚೇರಿಗೆ ತೆರಳಿದರು. ರಾತ್ರಿ 11.40ರವರೆಗೂ ವಿಚಾರಣೆ ಎದುರಿಸಿದರು. ಮಧ್ಯಾಹ್ನ 2 ಗಂಟೆಗೆ ಭೋಜನ ವಿರಾಮ ತೆಗೆದುಕೊಂಡಿದ್ದರು. ಒಟ್ಟು 10ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದರು.
ನಿನ್ನೆ ದೆಹಲಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಕಚೇರಿಗೆ ತೆರಳುತ್ತಿದ್ದ ರಾಜ್ಯದ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಸಂಸದ ಡಿ.ಕೆ. ಸುರೇಶ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದು ತಡ ರಾತ್ರಿ ಬಿಡುಗಡೆ ಮಾಡಿದ್ದಾರೆ.










