ಚಿಕ್ಕಮಗಳೂರು: ಸರ್ಕಾರದ ಯೋಜನೆಗಳು ಮತ್ತು ಅವುಗಳಿಂದ ದೊರೆಯುವ ಸವಲತ್ತು, ಸೌಲಭ್ಯಗಳನ್ನು ಯುವಜನತೆ ಸಮರ್ಪಕವಾಗಿ ಬಳಸಿಕೊಂಡು ಬೆಳೆಯಬೇಕು ಎಂದು ಕೇಂದ್ರ ಸರ್ಕಾರದ ಎಂಎಸ್‍ಎಂಇ ಸಂಸ್ಥೆಯ ಸಹಾಯಕ ನಿರ್ದೇಶಕ ಬಿ.ಎಸ್. ಹೊಸಮನಿ ಸಲಹೆ ನೀಡಿದರು.
ಭಾರತ ಸರ್ಕಾರದ ಎಂಎಸ್‍ಎಂಇ ಸಂಸ್ಥೆ ಮತ್ತು ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಾರಾಟ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಇಂದು ಅವರು ಮಾತನಾಡಿದರು.
ಬಹಳಷ್ಟು ವರ್ಷಗಳ ಹಿಂದೆ ಯುವಜನತೆಗೆ ಮುಂದೆ ಬರಲು ಕಾರ್ಯಕ್ರಮಗಳು ಮತ್ತು ಯೋಜನೆಗಳು ಇರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಯುವಜನರ ಅಭಿವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿವೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಕಾರ್ಯಕ್ರಮಗಳಡಿ ಯುವಜನತೆಗೆ ಕೌಶಲ್ಯಾಭಿವೃದ್ಧಿ ಪಡಿಸಿಕೊಳ್ಳಲು ಹಾಗೂ ಸ್ವಉದ್ಯೋಗ ಕೈಗೊಳ್ಳಲು ಹಲವು ಸೌಲಭ್ಯ, ಸವಲತ್ತುಗಳಿವೆ. ಯುವಜನತೆ ಅವುಗಳನ್ನು ಬಳಸಿಕೊಂಡು ಬೆಳೆದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಬೆಳೆಸಲು ಯುವಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್, ಯುವಜನತೆಗೆ ಸ್ವಉದ್ಯೋಗ ಕೈಗೊಳ್ಳಲು, ಕೈಗಾರಿಕೆಗಳನ್ನು ಸ್ಥಾಪಿಸಲು ಎಸ್‍ಬಿಐ ಸೇರಿದಂತೆ ಅನೇಕ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯಗಳಿದ್ದು, ಅದನ್ನು ಯುವಜನತೆ ಬಳಸಿಕೊಂಡು ಮುಂದೆ ಬರಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು ಮಾತನಾಡಿ, ಬ್ಯಾಂಕಿನ ಹಣ, ಸಾರ್ವಜನಿಕರ ಹಣ. ಅದನ್ನು ಸಾಲವಾಗಿ ಪಡೆದವರು ಸದ್ಬಳಕೆ ಮಾಡಿಕೊಳ್ಳಬೇಕು. ಸಕಾಲಕ್ಕೆ ಹಿಂತಿರುಗಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಅಧ್ಯಕ್ಷ ಆರ್.ಎಂ.ಮಹೇಶ್‍ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಧನ್ಯವಾದ ಅರ್ಪಿಸಿದರು.
ಎರಡು ದಿನಗಳ ಕಾಲ ನಡೆದ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಸಿಎಫ್‍ಟಿಆರ್‍ಐ, ಕಾಫಿ ಬೋರ್ಡ್, ಎಸ್‍ಬಿಐ,ಆಕ್ಸಿಸ್ ಬ್ಯಾಂಕ್,ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಬರೋಡ ಬ್ಯಾಂಕ್ ಸೇರಿದಂತೆ ಹಲವು ಇಲಾಖೆಗಳು ಪಾಲ್ಗೊಂಡು ಯುವಜನತೆಗೆ ಸ್ವಉದ್ಯೋಗ ಮತ್ತು ಕೈಗಾರಿಕೆ ಸ್ಥಾಪಿಸುವ ಕುರಿತು ಮಾಹಿತಿ ಒದಗಿಸಿದವು.
ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡವರಿಗೆ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. ಚಿಕ್ಕಮಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಉಪಾಧ್ಯಕ್ಷ ಶಾಂತಾರಾಮ್ ಹೆಗ್ಡೆ, ಕಾರ್ಯಕ್ರಮ ನಿರ್ದೇಶಕ ಎಸ್.ಎನ್.ವೆಂಕಟೇಶ್,ಕಾರ್ಯದರ್ಶಿ ವಿಜಯೇಂದ್ರ, ಜಂಟಿನಿರ್ದೇಶಕ ಶಿವಣ್ಣ, ನಿರ್ದೇಶಕ ಮಂಜಪ್ಪ ಉಪಸ್ಥಿತರಿದ್ದರು.