ಸರ್ಕಾರಿ ನೌಕರರಿಗೆ ನೂತನವಾಗಿ ಜಾರಿಗೊಳಿಸಿರುವ ಪಿಂಚಣಿ ಯೋಜನೆ ರದ್ದುಪಡಿಸುವಂತೆ ಬಿಎಸ್‍ಪಿ ಒತ್ತಾಯ…

88
firstsuddi

ಚಿಕ್ಕಮಗಳೂರು : ಸರ್ಕಾರಿ ನೌಕರರಿಗೆ ನೂತನವಾಗಿ ಜಾರಿಗೊಳಿಸಿರುವ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಿಂದಿದ್ದ ವ್ಯವಸ್ಥೆಯನ್ನೇ ಮುಂದುವರೆಸುವಂತೆ ಬಹುಜನ ಸಮಾಜಪಕ್ಷ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ನೂತನವಾಗಿ ಜಾರಿಗೊಳಿಸಿರುವ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದೆ, ಈ ಯೋಜನೆಯಲ್ಲಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಕ್ಕೆ ಜೀವನ ಭದ್ರತೆ ಮತ್ತು ಆರ್ಥಿಕ ಭದ್ರತೆಯಿಲ್ಲ ಅದರಿಂದಾಗಿ ನೌಕರರು ಅತಂತ್ರವಾಗುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ರಾಜ್ಯ ಸಕಾರ ಆರ್ಥಿಕ ಹೊರೆಯ ನೆಪದಲ್ಲಿ ಸರ್ಕಾರಿ ನಿವೃತ್ತ ನೌಕರರ ಬದುಕನ್ನು ಅಭದ್ರಗೊಳಿಸುವುದು ಸರಿಯಲ್ಲ, ಶಾಸಕರು, ಸಂಸದರು, ಮಂತ್ರಿಗಳ ಸಾರಿಗೆ ಮತ್ತು ಸಂಬಳದ ಏರಿಕೆಯ ವಿಚಾರದಲ್ಲಿ ಆರ್ಥಿಕ ಹೊರೆಯ ಬಗ್ಗೆ ಗಮನ ಹರಿಸದ ಸರ್ಕಾರ ನೌಕರರ ವಿಷಯದಲ್ಲಿ ಮಾತ್ರ ಮೀನಾಮೇಷ ಎಣಿಸುವುದು, ನೆಪ ಹೇಳುವುದು ಸಲ್ಲದು ಎಂದರು.

ಚುನಾವಣೆಯಲ್ಲಿ ಸೋತ ಶಾಸಕರು ಮತ್ತು ಸಂಸದರು ಪಿಂಚಣಿ ಸೌಲಭ್ಯಗಳನ್ನು ಪಡೆಯಬಹುದಾದರೆ ನಿವೃತ್ತ ಸರ್ಕಾರಿ ನೌಕರರು ಏಕೆ ಪಡೆಯಬಾರದು ಎಂದು ಪ್ರಶ್ನಿಸಿದರು.

ರಾಜಸ್ತಾನ್, ಜಾರ್ಖಂಡ್, ಛತ್ತೀಸಗಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹಳೆ ವ್ಯವಸ್ಥೆಯನ್ನೇ ಮರು ಜಾರಿಗೊಳಿಸಿರುವಂತೆ ರಾಜ್ಯದಲ್ಲೂ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ಪ್ರಧಾನ ಕಾರ್ಯದರ್ಶಿ ವಸಂತ, ಖಜಾಂಚಿ ನವೀನ್, ವಿಜಯ್‍ಕುಮಾರ್ ಹಾಜರಿದ್ದರು.