ಸಾಂಸ್ಕೃತಿಕ ನಗರಿಯಲ್ಲಿಂದು ದಸರಾ ಸಂಭ್ರಮ : ಜಂಬೂ ಸವಾರಿಗೆ ಕ್ಷಣಗಣನೆ…

38
firstsuddi

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಮನೆಮಾಡಿದ್ದು, ವಿಜಯ ದಶಮಿಯ ಇಂದು ಜಂಬೂಸವಾರಿ ನಡೆಯಲಿದೆ.

ಇಂದು ಸಂಜೆ 4.36ರಿಂದ 4.46ರೊಳಗೆ ಸಲ್ಲುವ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ನಂತರ 5ರಿಂದ 5.30ರೊಳಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಅಂಬಾರಿ ಹೊರಲಿರುವ ಅಭಿಮನ್ಯು ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಹೆಜ್ಜೆ ಹಾಕಲಿವೆ. ಒಂದು ತಾಸಿನಲ್ಲಿ ಮೆರವಣಿಗೆ ಸಂಪನ್ನಗೊಳ್ಳಲಿದೆ.

ಅರಮನೆಯಲ್ಲಿ ಶರನ್ನವರಾತ್ರಿಯ ಕೊನೆಯ ದಿನವಾದ ಇಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಜಯಯಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಮುಂಜಾನೆ 5.45ಕ್ಕೆ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸುಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಬೆಳಗ್ಗೆ 7.20ರಿಂದ 7.40ರವರೆಗೆ ಅರಮನೆ ರಾಜಪುರೋಹಿತರ ಸಮ್ಮುಖದಲ್ಲಿ ವಿಜಯದಶಮಿ ಮೆರವಣಿಗೆ ನಡೆಸಿದ ಯದುವೀರ್ ಒಡೆಯರ್, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ಮೂಲಕ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

ಜಂಬೂಸವಾರಿಯಲ್ಲಿ ಉತ್ಸವ ಮೂರ್ತಿಯಾಗಿ ಸಾಗುವ ಚಾಮುಂಡೇಶ್ವರಿ ಮೂರ್ತಿ ಅರಮನೆಗೆ ಆಗಮಿಸಿದೆ. ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ತರಲಾಗಿದ್ದು, ಈ ವೇಳೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡಗಳು ಭಾಗಿಯಾಗಿದ್ದವು.