ಬೆಂಗಳೂರು : ಇಂದು ಜೆಡಿಎಸ್ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿತು. ಟಿಎ ಶರವಣ ಹಾಗೂ ಬಿಎಂ ಫಾರೂಖ್ ನೇತೃತ್ವದ ನಿಯೋಗ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬೆಂಬಲಿಸುವಂತೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದರು.
ಭೇಟಿ ಬಳಿಕ ಮಾತನಾಡಿದ ಟಿ.ಎ. ಶರವಣ ಅವರು, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿಕೆ ಅವರ ಆದೇಶದ ಮೇರೆಗೆ ನಾನು ಮತ್ತು ಬಿ.ಎಂ. ಫಾರೂಕ್ ಸಿದ್ದರಾಮಯ್ಯರನ್ನು ಭೇಟಿ ಮಾಡಿದೆವು. ರಾಜ್ಯಸಭೆ ಅಭ್ಯರ್ಥಿ ವಿಚಾರವಾಗಿ ನಾವು ಜಾತ್ಯತೀತರು, ಜಾತ್ಯತೀತತೆಯನ್ನು ಉಳಿಸಲು ಎಲ್ಲರೂ ಒಂದೇ ಧ್ವನಿಯಲ್ಲಿ ಹೋರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಲು ಅವಕಾಶ ನೀಡಬಾರದು. ಇದು ಕಾಂಗ್ರೆಸ್ ಹಾಗೂ ನಮ್ಮ ಮನಸ್ಥಿತಿಯೂ ಹೌದು. ಈ ಕಾರಣಕ್ಕೆ ಭೇಟಿಯಾಗಿ, ಬೆಂಬಲಕ್ಕೆ ಮನವಿ ಮಾಡಿದೆವು ಎಂದು ತಿಳಿಸಿದರು.
ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ ಕೊನೆಯ ದಿನವಾದ ಕಾರಣ ಚರ್ಚೆ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ನೋಡೋಣ, ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.










