ಚಿಕ್ಕಬಳ್ಳಾಪುರ : ಸ್ಕೂಟಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ.
ಬೆಂಗಳೂರು ಮೂಲದ ದಂಪತಿ ಗೌಸ್(37), ಅಮ್ಮಾಜಾನ್(33) ಹಾಗೂ ಇವರ ಮಗ ರಿಯಾನ್(13) ಮೃತರು. ಇಂದು ಬೆಳಗ್ಗೆ ಮೂವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸ್ಕೂಟಿಯಲ್ಲಿ ಅಮ್ಮಾಜಾನ್ ಅವರ ತಂಗಿ ಮನೆ ಕದಿರಿಗೆ ಹೊರಟಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ತಿಂಡಿ ತಿನ್ನಲು ರಸ್ತೆ ಬದಿಯಲ್ಲಿರುವ ಹೋಟೆಲ್ ಗೆ ಸ್ಕೂಟಿ ತಿರುಗಿಸಿದ್ದಾರೆ. ಹೋಟೆಲ್ ನಲ್ಲಿ ತಿಂಡಿ ತಿಂದು ಮರಳಿ ಬಾಗೇಪಲ್ಲಿ ಕಡೆಗೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಬಾಗೇಪಲ್ಲಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮ ಸ್ಕೂಟಿ ಬಸ್ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿ ಬಸ್ ಡಿವೈಡರ್ ಮೇಲೆ ಹತ್ತಿದೆ. ಬಸ್ ಕೆಳಗೆ ಸಿಲುಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










