ಹರ್ಷ ಕೊಲೆ ಪ್ರಕರಣದಲ್ಲಿ ಎಂಟು ಮಂದಿ ಬಂಧನ : ಆರಗ ಜ್ಞಾನೇಂದ್ರ.

52
firstsuddi

ಬೆಂಗಳೂರು : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಜನರ ಬಂಧನ ಆಗಿದೆ. ಇನ್ನು ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಸುತ್ತೇವೆ. ಅಲ್ಲಿ ಜಿಲ್ಲಾಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತಾರೆ. ಪೊಲೀಸರ ತನಿಖೆಯಿಂದ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊರಗೆ ಬರಬೇಕು. ಈ ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದಾರೆ, ಅವರಿಗೆ ಏನು ಸಂಪರ್ಕವಿದೆ, ಎಲ್ಲಾ ಆಯಾಮಗಳಿಂದ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದರು.

ಸಮಾಜಘಾತುಕ ಬೆಳವಣಿಗೆಯಲ್ಲಿ ಪೊಲೀಸರ ಪಾತ್ರದ ಕುರಿತು ವರದಿ ಕೇಳಿದ್ದೇನೆ, ಈ ಬಗ್ಗೆ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ನಿರ್ದೇಶಿಸಿರುವುದಾಗಿ ಹೇಳಿದ್ದಾರೆ.