ಬೆಂಗಳೂರು : ಪತ್ನಿಯ ಜೊತೆ ಬ್ಯಾಂಕ್ ಗೆ ಬಂದಿದ್ದ ರೌಡಿಶೀಟರ್ ನನ್ನು ನಗರದ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂದು ಮಧ್ಯಾಹ್ನ 1:30ರ ಸುಮಾರಿಗೆ ಘಟನೆ ನಡೆದಿದ್ದು, ತನ್ನ ಹೆಂಡತಿಯೊಂದಿಗೆ ಬ್ಯಾಂಕ್ ಗೆ ಬಂದಿದ್ದ ರೌಡಿಶೀಟರ್ ಬಬ್ಲಿ ಬ್ಯಾಂಕ್ ಒಳಗೆ ಹೋದ ಕೂಡಲೇ ಹಿಂದಿನಿಂದ ಬಂದ ಐದಾರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೂರ್ವ ವಲಯ ಹೆಚ್ಚುವರಿ ಆಯುಕ್ತ ಎಸ್.ಮುರುಗನ್, ಅಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ಮಡಿವಾಳ ಉಪ ವಿಭಾಗ ಎಸಿಪಿ ಸುಧೀರ್ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯಾದ ಬಬ್ಲಿ ಕೋರಮಂಗಲ ರಾಜೇಂದ್ರ ಹಾಗೂ ವಿವೇಕ ನಗರದ ಜಾರ್ಜ್ ಎಂಬಾತನ ಜೊತೆ ಹಳೆ ವೈಷಮ್ಯ ಹೊಂದಿದ್ದ ಎನ್ನಲಾಗಿದೆ. ಇನ್ನೊಂದೆಡೆ ಮತಾಂತರ ಮಾಡೋದನ್ನೇ ಬಬ್ಲಿ ದಂಧೆ ಮಾಡಿಕೊಂಡಿದ್ದ ಎನ್ನಲಾಗ್ತಿದೆ.










