ಮೈಸೂರು : ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿಯನ್ನು 9 ತಿಂಗಳ ನಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಟೋಬರ್ 2020ರಲ್ಲಿ ವೆಂಕಟರಾಜು (50) ಕೊಲೆಯಾಗಿತ್ತು. ಕೊಲೆ ಪ್ರಕರಣ ಭೇಧಿಸಿದ ಬನ್ನೂರು ಪೊಲೀಸರು ಪತ್ನಿ ಉಮಾ ಹಾಗೂ ಪ್ರಿಯಕರ ಅವಿನಾಶ್ ನನ್ನು ಬಂಧಿಸಿದ್ದಾರೆ.
ತನಗಿಂತ 20 ವರ್ಷ ದೊಡ್ಡವರಾಗಿದ್ದ ಮಂಡ್ಯದ ಹೊನಗಾನಹಳ್ಳಿಯ ಎಚ್.ಟಿ.ವೆಂಕಟರಾಜು (50) ಅವರನ್ನು 10 ವರ್ಷಗಳ ಹಿಂದೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಳ್ಳೇಕೆರೆ ಗ್ರಾಮದ ಉಮಾ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. 2ನೇ ಮಗುವಿನ ಬಾಣಂತನಕ್ಕಾಗಿ ತಿ.ನರಸೀಪುರ ತಾಲ್ಲೂಕಿನ ಹುಣಸಗಳ್ಳಿ ಗ್ರಾಮದ ತನ್ನ ಅಜ್ಜಿ ಮನೆಗೆ ಹೋಗಿದ್ದಾಗ, ಮನೆಯ ಪಕ್ಕದಲ್ಲೇ ಇದ್ದ ಅವಿನಾಶ್ ಎಂಬ ಯುವಕ ಪರಿಚಯವಾಗಿದ್ದಾನೆ. ನಂತರ, ಇಬ್ಬರ ಮಧ್ಯೆ ಅನೈತಿಕ ಸಂಬಂಧ ಬೆಳೆದಿದೆ.
ಕಳೆದ ವರ್ಷ ಅಕ್ಟೋಬರ್ 10ರಂದು ಪತಿಯನ್ನು ತನ್ನ ಅಜ್ಜಿ ಮನೆಗೆ ಕರೆಸಿಕೊಂಡ ಉಮಾ ನಿದ್ದೆ ಮಾತ್ರೆ ಹಾಕಿ ಕಾಫಿ ಕೊಟ್ಟು ಪತಿಯ ವೃಷಣವನ್ನು ಅದುಮಿ, ಮುಖಕ್ಕೆ ದಿಂಬು ಇಟ್ಟು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ನಂತರ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು.
ಆದರೆ ಮೃತ ವೆಂಕಟರಾಜು ಅವರ ಸೋದರ ಎಚ್.ಟಿ.ರವೀಂದ್ರ ಅವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ಮರಣೋತ್ತರ ಮತ್ತು ವಿಧಿವಿಜ್ಞಾನ ಪರೀಕ್ಷೆಗಳ ವರದಿಗಳಿಂದ ಕೊಲೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.










