ಹಾಸನ : ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಾಡುಮನೆ ಸಮೀಪದ ಗುಡಾಣಕೆರೆ ಗ್ರಾಮದಲ್ಲಿ ನಡೆದಿದೆ. ರತನ್(26) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮೃತ ರತನ್ ಮಹಾಲಯ ಅಮಾವಾಸ್ಯೆ ಇದ್ದುದರಿಂದ ನಿನ್ನೆ ರಾತ್ರಿಯಷ್ಟೇ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದರು. ಇಂದು ಬೆಳಿಗ್ಗೆ ತನ್ನ ಕುಟುಂಬದ ನಾಲ್ಕು ಮಂದಿ ಜೊತೆ ಗುಡಾಣಕೆರೆ ಬಳಿ ಇರುವ ಅಬ್ಬಿಗುಂಡಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ತನ್ನ ಜೊತೆಯಲ್ಲಿದ್ದವರಿಗೆ ಮೊಬೈಲ್ ಕೊಟ್ಟು ಫೊಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದು, ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಳುಗು ತಜ್ಞರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದು, ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










