ಹಿಜಾಬ್ ತೀರ್ಪು ವಿರೋಧಿಸಿ ಬಂದ್‌ಗೆ ಕರೆ : ಉಡುಪಿಯಲ್ಲಿ ಮುಸ್ಲಿಂ ವರ್ತಕರಿಂದ ಉತ್ತಮ ಬೆಂಬಲ…

68
firstsuddi

ಉಡುಪಿ : ಹಿಜಾಬ್ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ನಗರದಲ್ಲಿ ಇಂದು ಉತ್ತಮ ಬೆಂಬಲ ವ್ಯಕ್ತವಾಗಿದೆ.

ಮುಸ್ಲಿಮರು ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಚ್ಚಿ ಸಮುದಾಯದ ಸಂಘಟನೆಗಳು ತೆಗೆದುಕೊಂಡ ನಿರ್ಣಯವನ್ನು ಬೆಂಬಲಿಸಬೇಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ವಿನಂತಿಸಿತ್ತು. ಅದರಂತೆ ಜಿಲ್ಲೆಯ ಉಡುಪಿ ನಗರ, ಕಾರ್ಕಳ, ಕುಂದಾಪುರ, ಬೈಂದೂರು, ಕಾಪು, ಪಡುಬಿದ್ರೆ, ಶಿರ್ವಗಳಲ್ಲಿ ಮುಸ್ಲಿಮರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದ್ದಾರೆ.

ನಗರದಲ್ಲಿ ಜಾಮಿಯ ಮಸೀದಿ, ಅಂಜುಮನ್ ಮಸೀದಿ ರಸ್ತೆಯಲ್ಲಿ ಸಂಪೂರ್ಣ ಬಂದ್ ಕಂಡುಬಂದಿದೆ. ಅದೇ ರೀತಿ ತರಕಾರಿ ಮಾರುಕಟ್ಟೆಯಲ್ಲಿಯೂ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಅಲ್ಲದೆ ಮುಸ್ಲಿಮರ ಹೊಟೇಲ್, ಹೂವು ಅಂಗಡಿ, ಚಪ್ಪಲಿ, ಬಟ್ಟೆ ಸೇರಿದಂತೆ ಹೆಚ್ಚಿನ ಅಂಗಡಿಗಳು ಮುಚ್ಚಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.