ಹೈದರಾಬಾದ್ : ಹುಟ್ಟುಹಬ್ಬದ ದಿನದಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಯುವತಿ ಮೇಲೆ ತನ್ನ ಸ್ನೇಹಿತನೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಹನುಮಕೊಂಡ ನಗರದಲ್ಲಿ ನಡೆದಿದೆ. ಯುವತಿ ಬುಧವಾರ ತನ್ನ ಹುಟ್ಟುಹಬ್ಬವಾಗಿದ್ದರಿಂದ ಬೆಳಿಗ್ಗೆ ಪೂಜೆ ಮಾಡಿಸಲೆಂದು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಯುವತಿಗೆ ಆಕೆಯ ಸ್ನೇಹಿತ ಕರೆ ಮಾಡಿ ಕಾಜಿಪೇಟೆಗೆ ಬರುವಂತೆ ಹೇಳಿದ್ದು, ಬಳಿಕ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ದೇವಸ್ಥಾನಕ್ಕೆ ತೆರಳಿದ ಮಗಳು ಹಲವು ಗಂಟೆಗಳೂ ಕಳೆದರೂ ಮನೆಗೆ ಬಾರದಿದ್ದರಿಂದ ಯುವತಿಯ ಪೋಷಕರು ಮೊಬೈಲ್‍ಗೆ ಕರೆ ಮಾಡಿದ್ದಾರೆ. ಆದರೆ ಯುವತಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಎಚ್ಚೆತ್ತ ಪೋಷಕರು ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾಗಿರುವುದಾಗಿ ದೂರನ್ನು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯನ್ನು ಹುಡುಕಲು ಪೊಲೀಸ್ ತಂಡ ರಚಿಸಿದ್ದಾರೆ. ಬುಧವಾರ ತಡರಾತ್ರಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.










