ಹುಬ್ಬಳ್ಳಿ: ಚಾಮರಾಜನಗರ ಹಾಗೂ ಕಲಬುರಗಿಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತದ ಬಳಿಕ ಇಂತಹದ್ದೇ ಮತ್ತೊಂದು ಅವಘಡ ವಾಣಿಜ್ಯ ನಗರಿಯಲ್ಲಿ ಸಂಭವಿಸಿದೆ. ಆಕ್ಸಿಜನ್ ಕೊರತೆಯಿಂದಾಗಿ ಐವರು ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಭಾಣಜಿ ಖಿಮಜಿ ಲೈಫಲೈನ್ ಆಸ್ಪತ್ರೆಯಲ್ಲಿ ನಡೆದಿದೆ.
ಲೈಫಲೈನ್ ಆಸ್ಪತ್ರೆಯಲ್ಲಿ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಸೋಂಕಿತರು ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ ಐವರ ಸಾವಿಗೆ ಆಕ್ಸಿಜನ್ ಸಮಸ್ಯೆ ಕಾರಣವಲ್ಲ. ತನಿಖೆ ಆದ ಮೇಲೆ ಪೂರ್ಣ ಮಾಹಿತಿ ನೀಡುತ್ತೇವೆ ಎಂದಿದ್ದಾರೆ. ಆದರೆ ಮೃತರ ಸಂಬಂಧಿಕರು ಮಾತ್ರ ಆಕ್ಸಿಜನ್ ಸಮಸ್ಯೆ ಯಿಂದ ಸಾವಿಗೀಡಾಗಿದ್ದಾರೆ ಎಂದು ಹೇಳುತ್ತಿದ್ದಾರೆ.










