ಹೊಸಪೇಟೆ : ಮಳೆ ನೀರು ರಸ್ತೆಯಲ್ಲೇ ನಿಂತು ಕೆರೆಯಂತಾದ ರಾಷ್ಟ್ರೀಯ ಹೆದ್ದಾರಿ-ವಾಹನ ಸವಾರರ ಪರದಾಟ…

141
firstsuddi

ಹೊಸಪೇಟೆ : ತಾಲೂಕಿನ ಮರಿಯಮ್ಮನಹಳ್ಳಿಗೆ ಸಮೀಪದ ಗಾಳೆಮ್ಮನಗುಡಿ ಬಳಿಯ ಎಂ.ಎಸ್.ಪಿ.ಎಲ್. ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಳೆ ನೀರು ರಸ್ತೆಯಲ್ಲೇ ನಿಂತು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 50ರ ಎರಡೂ ಬದಿಯಲ್ಲಿ ಕಾದಿಟ್ಟ ಅರಣ್ಯ ಪ್ರದೇಶ ಹೊಂದಿದ್ದು, ಮಳೆ ಬಂದರೆ ಗುಡ್ಡಗಳಿಂದ ರಸ್ತೆಗೆ ನೀರು ಹರಿದು ಬರುತ್ತದೆ. ಅಲ್ಲದೇ ಈ ರೀತಿ ಗುಡ್ಡಗಳಿಂದ ಹರಿದುಬರುವ ನೀರು ರಸ್ತೆಯಲ್ಲಿಯೇ ಸಂಗ್ರಹವಾಗಿ ನಿಲ್ಲುತ್ತದೆ. ಹೆದ್ದಾರಿ ಪ್ರಾಧಿಕಾರದವರು ಮಳೆ ನೀರು ಹರಿಯಲು ವೈಜ್ಞಾನಿಕವಾಗಿ ರಸ್ತೆ ನಿರ್ಮಿಸದ ಕಾರಣ ರಾಷ್ಟ್ರೀಯ ಹೆದ್ದಾರಿಯ ಕೆಲ ಭಾಗಗಳಲ್ಲಿ ನೀರು ಹರಿಯಲು ಆಸ್ಪದವಿಲ್ಲದೇ ಮಳೆನೀರು ಹೆದ್ದಾರಿಯಲ್ಲೇ ನಿಲ್ಲುವುದರಿಂದ ರಸ್ತೆಯು ಕೆರೆಯಂತಾಗಿ ಮಾರ್ಪಟ್ಟಿದೆ. ಇದರಿಂದ ಮಳೆಯ ನಿಂತ ನೀರಿನಲ್ಲಿ ವಾಹನಗಳು ಮಿಂದೇಳುತ್ತಿವೆ. ಅಲ್ಲದೇ ದ್ವಿಚಕ್ರ ಸವಾರರು ಈ ನೀರಿನಲ್ಲಿ ವಾಹನ ಚಲಾಯಿಸಲು ಪರದಾಡುವಂತಾಗಿದೆ. ಇನ್ನು ಮೇಲಾದರೂ ಮಳೆ ನೀರು ಸರಾಗವಾಗಿ ಹರಿಯಲು ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಾಗಿದೆ.