ನವದೆಹಲಿ: ಕಾಂಗ್ರೆಸ್ ಸೇರುವ ಆಫರ್ ನಿರಾಕರಿಸಿರುವ, ಚುನಾವಣಾ ಚಾಣಕ್ಯ ಎಂದೇ ಕರೆಯಲ್ಪಡುವ ಪ್ರಶಾಂತ್ ಕಿಶೋರ್ ತಮ್ಮದೇ ನೇತೃತ್ವದಲ್ಲಿ ಹೊಸ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರು ಮಾಡಿರುವ ಟ್ವೀಟ್ ಇದಕ್ಕೆ ಪುಷ್ಟಿ ನೀಡುವಂತಿದೆ.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಥಗರ್ಭಿತ ಪಾಲ್ಗೊಳ್ಳುವಿಕೆಗೆ ನಾನು ತುಡಿತ ಹೊಂದಿದ್ದೇನೆ. ಈ ಮೂಲಕ ಜನಪರ ನೀತಿಯನ್ನು ಅನುಷ್ಠಾನಕ್ಕೆ ತರುವ ಯೋಚನೆ ಇದೆ. ಸದ್ಯ ನಾನು ಪುಟ ತಿರುವಿ ಹಾಕುತ್ತಿದ್ದು, ನಿಜವಾದ ಪ್ರಭುಗಳ ಬಳಿ ತೆರಳುವ ಸಮಯ ಬಂದಿದೆ. ಬಿಹಾರದಿಂದ ಇದು ಆರಂಭ’ ಅಂತ ಟ್ವೀಟ್ ಮಾಡಿದ್ದಾರೆ.
ಇತ್ತೀಚಿಗಷ್ಟೇ ತಮ್ಮ ಪಕ್ಷಕ್ಕೆ ಸೇರುವಂತೆ ಕಾಂಗ್ರೆಸ್ ನೀಡಿದ್ದ ಆಫರ್ ಪ್ರಶಾಂತ್ ಕಿಶೋರ್ ತಿರಸ್ಕರಿಸಿದ್ದರು. ಈ ಬಗ್ಗೆ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದರು.










