ಕಾಲೇಜು ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ವಿದ್ಯಾರ್ಥಿ – ಚಿಕಿತ್ಸೆ ಫಲಿಸದೆ ಸಾವು…

88
firstsuddi

ಮಧ್ಯಪ್ರದೇಶ : ಕಾಲೇಜಿನ ಪ್ರಾಂಶುಪಾಲೆಯನ್ನು ಮಾಜಿ ವಿದ್ಯಾರ್ಥಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಇಲ್ಲಿನ ಸಿಮ್ರೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತ ಶರ್ಮಾ(54) ಎಂಬುವವರೇ ಕೊಲೆಯಾದವರು. ಕಾಲೇಜಿನ ಮಾಜಿ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ್(24) ಎಂಬುವವನೇ ಈ ಕೃತ್ಯ ಎಸಗಿದ್ದಾನೆ.

ಫೆಬ್ರವರಿ 20 ರಂದು ಮಾರ್ಕ್ಸ್‌ಕಾರ್ಡ್ ವಿಷಯವಾಗಿ ಗಲಾಟೆ ಮಾಡಿಕೊಂಡಿದ್ದ ಅಶುತೋಷ್ ಶ್ರೀವಾಸ್ತವ್ ನಂತರ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪ್ರಾಂಶುಪಾಲರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶೇ.80ರಷ್ಟು ದೇಹವು ಬೆಂಕಿಯಲ್ಲಿ ಬೆಂದು ಹೋಗಿದ್ದು, ವಿಮುಕ್ತ ಶರ್ಮಾ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಕೊನೆಗೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿತ್ತು. ಪ್ರಾಂಶುಪಾಲರ ಸಾವಿನ ನಂತರ ಕೊಲೆ ಎಂದು ಎಫ್‍ಐಆರ್‌ನಲ್ಲಿ  ಸೇರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.

ಇದೇ ವಿಷಯವಾಗಿ 2021ರಿಂದಲೂ ಕಾಲೇಜಿಗೆ ಬಂದು ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರ ಬಳಿ ಅಶುತೋಷ್ ಶ್ರೀವಾಸ್ತವ್ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಪ್ರಾಂಶುಪಾಲೆ ವಿಮುಕ್ತ ಶರ್ಮಾ, ಪ್ರಾಧ್ಯಾಪಕರಾದ ವಿಜಯ್ ಪಾಟೀಲ್, ಉಮೇಶ್ ಜೊತೆ ತೆರಳಿ ನಾಲ್ಕು ಬಾರಿ ಲಿಖಿತ ದೂರು ನೀಡಿದ್ದರು ಎಂದು ತಿಳಿದುಬಂದಿದೆ.