ಅತ್ಯಾಚಾರಿ ಎಎಸ್ಐಗೆ 20 ವರ್ಷ ಜೈಲು ಶಿಕ್ಷೆ, 1ಲಕ್ಷ ರೂ. ದಂಡ…

149
firstsuddi

ತುಮಕೂರು : ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಎಸ್ಐಗೆ ತುಮಕೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಹಾಗೂ 1ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ತುಮಕೂರಿನ ಮಹಿಳಾ ಠಾಣಾ ಎ.ಎಸ್.ಐ ಉಮೇಶಯ್ಯ 2017ರ ಜ.15ರಂದು ರಾತ್ರಿ ಗಸ್ತಿನಲ್ಲಿದ್ದಾಗ ನಗರದ ಅಂತರಸನಹಳ್ಳಿ ಸೇತುವೆ ಬಳಿ ಹೋಗುತ್ತಿದ್ದ ಬುದ್ಧಿಮಾಂದ್ಯೆಗೆ ಡ್ರಾಪ್ ಕೊಡೋ ನೆಪದಲ್ಲಿ ಖಾಸಗಿ ಬೊಲೆರೋ ವಾಹನದಲ್ಲಿ ಅತ್ಯಾಚಾರ ಎಸಗಿದ್ದನು. ಈ ಸಂಬಂಧ ಎಎಸ್ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸತತ ಐದು ವರ್ಷಗಳ ವಾದ ಪ್ರತಿವಾದಗಳ ಬಳಿಕ ಜಿಲ್ಲಾ ನ್ಯಾಯಾಲಯದಲ್ಲಿ ಎಎಸ್ಐ ಉಮೇಶಯ್ಯ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ ಅವರು ಆರೋಪಿ ಉಮೇಶಯ್ಯನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಸಂತ್ರಸ್ತೆಗೆ ಪರಿಹಾರವಾಗಿ ಒಂದು ಲಕ್ಷ ರೂ. ನೀಡುವಂತೆ ಸೂಚಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ಸಂತ್ರಸ್ತೆ ಪರ ವಾದ ಮಂಡಿಸಿದ್ದರು.