ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ – ಉಭಯ ಸದನ ಕಲಾಪ ಮುಂದೂಡಿಕೆ…

44
firstsuddi

ನವದೆಹಲಿ : ಅದಾನಿ ಗ್ರೂಪ್ ಕಂಪನಿಗಳ ವಿರುದ್ಧದ ಹಗರಣದ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳ ಸದಸ್ಯರ ಒತ್ತಾಯದ ನಡುವೆ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.

ಸ್ಪೀಕರ್ ಓಂ ಬಿರ್ಲಾ ಅವರು ಜಾಂಬಿಯಾದಿಂದ ಬಂದಿರುವ ಸಂಸದೀಯ ನಿಯೋಗವನ್ನು ಸ್ವಾಗತಿಸಿ ಪ್ರಶ್ನೋತ್ತರ ಅವಧಿಯನ್ನು ಆರಂಭಿಸುತ್ತಿದ್ದಂತೆಯೇ ವಿರೋಧ ಪಕ್ಷದ ಸದಸ್ಯರು ಅದಾನಿ ಗ್ರೂಪ್ ನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೆಂದು ಮನವಿ ಮಾಡಿದವು. ಇದಕ್ಕೆ ಸಭಾಧ್ಯಕ್ಷರು ಒಪ್ಪದ ಹಿನ್ನಲೆ ವಿಪಕ್ಷಗಳ ನಾಯಕರು ಬಾವಿಗಿಳಿದು ಪ್ರತಿಭಟನೆ ನಡೆಸಿದವು. ಪ್ರತಿಭಟನೆ ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು.

ಎರಡು ಗಂಟೆಗೆ ಸದನ ಆರಂಭವಾದ ಬಳಿಕ ರಾಜ್ಯಸಭೆ ಸಂಸದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೇರಿದ ಎಲ್ಲ ವಿಪಕ್ಷಗಳು ಜಂಟಿ ಸಂಸತ್ತಿನ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದವು. ಈ ವೇಳೆ ಉಂಟಾದ ಗದ್ದಲದಿಂದಾಗಿ ಎರಡು ಕಲಾಪಗಳನ್ನು ನಾಳೆಗೆ ಮುಂದೂಡಲಾಯಿತು.

ಹಿಂಡನ್ ಬರ್ಗ್ ವರದಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಒಡೆತನದ ಎಲ್ಲ ಕಂಪನಿಗಳ ಷೇರುಗಳ ಮೌಲ್ಯ ತೀವ್ರ ಕುಸಿತ ಕಂಡಿವೆ. ಭಾರತದ ಹೂಡಿಕೆದಾರರು ಅಪಾಯದಲ್ಲಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.

ಅದಾನಿ ಸಂಸ್ಥೆ ಮೇಲೆ ಅಮೆರಿಕದ ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆ ಗಂಭೀರ ಆರೋಪದ ವರದಿ ಬಳಿಕ ಅದಾನಿ ಸಂಸ್ಥೆಯ ಷೇರುಗಳು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗೌತಮ್ ಅದಾನಿ ಒಡೆತನದ ಸಂಸ್ಥೆಯು ತಮ್ಮ ಷೇರುಗಳಲ್ಲಿ ಉದ್ದೇಶ ಪೂರ್ವಕವಾಗಿ ದರ ಏರಿಳಿತ ಮತ್ತು ಕೃತಕ ವ್ಯವಹಾರ ನಡೆಸಿದೆ ಎಂದು ಆರೋಪಿಸಿತ್ತು.

ಹಿಂಡನ್ ಬರ್ಗ್ ಪ್ರಕಟಿಸಿದ್ದ ವರದಿ ವಿಶ್ವಾದ್ಯಂತ ಸದ್ದು ಮಾಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಉದ್ಯಮಿ ಗೌತಮ್ ಅದಾನಿ ಸಮೂಹ ಸಂಸ್ಥೆಗಳ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಬೆನ್ನಲ್ಲೇ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್ ಪಿಒ ಪ್ರಕ್ರಿಯೆಯನ್ನೇ ರದ್ದು ಮಾಡಿದೆ.

20,000 ಕೋಟಿ ರೂ. ಮೌಲ್ಯದ ಎಫ್ ಪಿಒಗೆ(ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿಯು ಇತ್ತೀಚೆಗಷ್ಟೇ ಚಾಲನೆ ನೀಡಿತ್ತು. ಆದರೆ ಈಗ ಎಫ್ ಪಿಒ ರದ್ದುಗೊಳಿಸಿ, ಹೂಡಿಕೆದಾರರಿಗೆ ಹಣ ವಾಪಸ್ ಕೊಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಗೌತಮ್ ಅದಾನಿ ಪ್ರತಿಕ್ರಿಯಿಸಿ ಹೂಡಿಕೆದಾರರ ಆಸಕ್ತಿ ಬಹಳ ಮುಖ್ಯ ಎಂದು ಹೇಳಿದ್ದಾರೆ.

ನಮ್ಮ ಷೇರು ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್ ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಅದಾನಿ ತಿಳಿಸಿದ್ದಾರೆ.