ಬೆಂಗಳೂರು : ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ನಾಳೆ ರಾತ್ರಿ 10 ಗಂಟೆಯಿಂದ 5 ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಆ ಸಮಯದಲ್ಲಿ ಅನಾವಶ್ಯಕವಾಗಿ ಯಾರು ಹೊರಗಡೆ ಬರುವಂತಿಲ್ಲ. ಅನುಮತಿಯಿಲ್ಲದೆ ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ ಅವರ ಮೇಲೆ ದೂರು ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಟ್ ಕರ್ಫ್ಯೂ ಸರ್ಕಾರದ ಆದೇಶದ ಪ್ರಕಾರ ಇರಲಿದೆ. ಈ ವೇಳೆ ಯಾರು ಹೊರಗಡೆ ಓಡಾಡುವುದಕ್ಕೆ ಬಿಡುವುದಿಲ್ಲ. ಎಂದಿನಂತೆ ಬಸ್ ಹಾಗೂ ಕ್ಯಾಬ್ ಇರಲಿವೆ. ನಗರದ ಹಲವೆಡೆ ನಾಕಾಬಂದಿ ಮಾಡಿ ಎಲ್ಲಾ ಕಡೆ ಬಂದ್ ಮಾಡಿ ಗಸ್ತು ಪೊಲೀಸರನ್ನು ನಿಯೋಜಿಸಲಾಗುವುದು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಎನ್‌ಡಿಎಂಎ ಕೇಸ್ ಹಾಕಲಾಗುತ್ತದೆ ಎಂದರು.
ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಾರಿ ಯಾವುದೇ ಪಾಸ್ ಕೊಡಲ್ಲ. ಬಸ್, ರೈಲ್ವೆ ನಿಲ್ದಾಣಗಳಿಗೆ ತೆರಳುವವರು ಬುಕ್ಕಿಂಗ್ ಮಾಡಿರುವ ಟಿಕೆಟ್ ತೋರಿಸಬೇಕು. ಆಸ್ಪತ್ರೆಗೆ ಹೋಗುವವರು ವೈದ್ಯಕೀಯ ದಾಖಲೆ ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ರಾತ್ರಿ ಪಾಳಿ ಮಾಡುವವರು ತಮ್ಮ ತಮ್ಮ ಐಡಿ ಕಾರ್ಡ್ಗಳನ್ನು ತೋರಿಸಿದರೆ ಅವಕಾಶ ಮಾಡಿ ಕೊಡುತ್ತೇವೆ ಎಂದರು.
ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಎಂಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾನಗರದಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿಸುವುದರ ಜೊತೆಗೆ ಸಿಸಿಟಿವಿ ಅವಳಡಿಕೆ ಸಿದ್ಧತೆ ನಡೆಸಲಾಗುತ್ತಿದೆ. ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾ ಹಾಕಿ ಪೊಲೀಸರನ್ನು ನಿಯೋಜನೆ ಮಾಡುತ್ತೇವೆ. ಜನರು ನಿಯಮಗಳನ್ನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.










