ಇಂದಿನಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ…

101
firstsuddi

ಬೆಂಗಳೂರು : ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ.  ನೈಟ್ ಕರ್ಫ್ಯೂ ಆದೇಶ ಇಂದಿನಿಂದ (ಡಿ.28) ಜಾರಿಗೆ ಬರಲಿದ್ದು, ಜ.7 ರ ವರೆಗೆ ಮುಂದುವರಿಯಲಿದೆ. ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಕರ್ಫ್ಯೂ ಜೊತೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಯಾವುದಕ್ಕೆಲ್ಲಾ ನಿರ್ಬಂಧ? ನಿರ್ಬಂಧವಿಲ್ಲ?:
• ನೈಟ್ ಕರ್ಫ್ಯೂ ವೇಳೆ ರೋಗಿಗಳು ಮತ್ತು ಅವರ ಪರಿಚಾರಕರು/ವ್ಯಕ್ತಿಗಳ ಓಡಾಟಕ್ಕೆ ತುರ್ತು ಅಗತ್ಯ ಸಂಚಾರಕ್ಕೆ ಅವಕಾಶ.

• ಮೆಡಿಕಲ್ ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಅವಕಾಶ ಇದೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

• ಸಂಸ್ಥೆಗಳಲ್ಲಿ ರಾತ್ರಿ ಪಾಳಿಯ ಉದ್ಯೋಗಿಗಳು ಕಂಪನಿಯ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶವಿದೆ.

• ಇಂಟರ್‌ನೆಟ್ ಸೇವೆಗಳು ಮತ್ತು ದೂರಸಂಪರ್ಕ ಸೇವೆ ಕಂಪನಿಗಳ ಉದ್ಯೋಗಿಗಳು, ವಾಹನಗಳ ಸಂಚಾರಕ್ಕೆ ಅವಕಾಶ (ಐಡಿ ಕಾರ್ಡ್ ಇರಬೇಕು).

• ಸಾರ್ವಜನಿಕ ಸಾರಿಗೆ, ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ.

• ಹೋಮ್ ಡೆಲಿವರಿ ಮತ್ತು ಇ-ಕಾಮರ್ಸ್ನ ಕಂಪನಿಗಳನ್ನು ಅನುಮತಿಸಲಾಗಿದೆ.

• ಬಸ್ ಗಳು, ರೈಲುಗಳು, ಮೆಟ್ರೋ ರೈಲು ಸೇವೆಗಳು ಮತ್ತು ವಿಮಾನ ಪ್ರಯಾಣಕ್ಕೂ ಅನುಮತಿಸಲಾಗಿದೆ.

• ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟ ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್ ಗಳು/ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಇತ್ಯಾದಿಗಳಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಓಡಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಪ್ರಯಾಣಿಕರು ಪ್ರಯಾಣ ದಾಖಲೆಗಳು/ಟಿಕೆಟ್ಗಳನ್ನು ಪ್ರದರ್ಶಿಸಿದರೆ ಮಾತ್ರ ಅವಕಾಶ ಇದೆ.

• ಡಿಸೆಂಬರ್ 30ರಿಂದ 2022ರ ಜನವರಿ 2ರ ವರೆಗೂ ರೆಸ್ಟೊರೆಂಟ್, ಬಾರ್, ಪಬ್ ಹಾಗೂ ಹೋಟೆಲ್ ಗಳಲ್ಲಿ ಸಾಮರ್ಥ್ಯದ ಶೇ 50ರಷ್ಟು ಆಸನಗಳ ಭರ್ತಿಗೆ ಅವಕಾಶ. ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ನೆಗಟಿವ್ ರಿಪೋರ್ಟ್ ಹೊಂದಿರಬೇಕು ಮತ್ತು 2 ಡೋಸ್ ಲಸಿಕೆ ಪಡೆದಿರಬೇಕು.

• ಡಿ. 28 ರಿಂದ ಮದುವೆ ಸೇರಿದಂತೆ ಇತರೆ ಸಭೆ ಸಮಾರಂಭಗಳಲ್ಲಿ ಭಾಗಿಯಾಗುವವರ ಸಂಖ್ಯೆ 300 ಜನರನ್ನು ಮೀರುವಂತಿಲ್ಲ.

• ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರ ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಿರುವ ಎಲ್ಲಾ ಗಡಿ ಜಿಲ್ಲೆಗಳಲ್ಲಿ ಕಣ್ಗಾವಲಿಡುವಂತೆ ಸೂಚಿಸಲಾಗಿದೆ.