ನವದೆಹಲಿ: ತನ್ನ ಸಂಗಾತಿಯನ್ನು ಮಹಿಳೆಯೊಬ್ಬರು ಸ್ಕ್ರೂ ಡ್ರೈವರ್, ಸುತ್ತಿಗೆ ಮತ್ತು ಕೋಲಿನಿಂದ ಮನಬಂದಂತೆ ಹೊಡೆದು ದಾರುಣವಾಗಿ ಕೊಲೆ ಮಾಡಿರುವ ಘಟನೆ ನವದೆಹಲಿಯ ಭಲ್ಸವ್ ಡೈರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಕುಂದಪುರ್‍ನಲ್ಲಿ ನಡೆದಿದೆ. ತನ್ನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಸಂಗಾತಿಯನ್ನು ಹತ್ಯೆ ಮಾಡಿ ನಂತರ ಶವದ ಪಕ್ಕದಲ್ಲಿಯೇ 8 ಗಂಟೆಗಳ ಕಾಲ ಸಮಯ ಕಳೆದ ಮಹಿಳೆ ನಂತರ ತಾನು ಕೊಲೆ ಮಾಡಿರುವ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
ಹಲವು ವರ್ಷಗಳಿಂದ ಪ್ಲಂಬರ್ ಕೆಲಸ ಮಾಡುತ್ತಿದ್ದ ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿದ್ದ ಈ ಮಹಿಳೆ. 2018ರಲ್ಲಿ ತಾನು ಮದುವೆಯಾದ ಗಂಡನಿಂದ ದೂರವಾಗಿ ಮಹಿಳೆ ಈತನ ಜೊತೆಗೆ ಸಹ ಜೀವನ ನಡೆಸುತ್ತಿದ್ದಳು. ಇವಳ ನಾಲ್ಕು ಮಕ್ಕಳನ್ನು ತನ್ನ ಮೊದಲ ಗಂಡನ ಮನೆಯಲ್ಲಿ ಬಿಟ್ಟಿದ್ದಳು. ಕಳೆದ ಕೆಲವು ವರ್ಷಗಳ ಹಿಂದೆ ಈ ವ್ಯಕ್ತಿಯನ್ನು ಸಹ ಬಿಟ್ಟ ಮಹಿಳೆ ಮತ್ತೊಬ್ಬನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಮುಂದಾಗಿದ್ದಳು. ಇದು ಇಬ್ಬರ ನಡುವಿನ ಗಲಾಟೆಗೆ ಕಾರಣವಾಯಿತು. ಮಹಿಳೆಯ ಈ ನಡತೆಯನ್ನು ಪ್ರಶ್ನಿಸಿದ ಕಾರಣಕ್ಕೆ ಆತನನ್ನು ಆಕೆ ಸ್ಕ್ರೂ ಡ್ರೈವರ್‍ನಿಂದ ಹೊಡೆದಿದ್ದಾಳೆ. ಜ್ಞಾನತಪ್ಪಿದ ಆತನ ಮೇಲೆ ಕೋಲು ಮತ್ತು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾಳೆ.
ಈ ಘಟನೆಯ ಕುರಿತು ಮಾತನಾಡಿದ ಪೊಲೀಸರು ಮಹಿಳೆಯು ವ್ಯಕ್ತಿಯ ದೇಹವನ್ನು ಸ್ಕ್ರೂಡ್ರೈವರ್‌ನಿಂದ ಇರಿದು ಕೊಂದಿದ್ದಾಳೆ. ಆತನನ್ನು ಕೊಂದು ಆತನ ಸಾವಿನ ಬಳಿಕವೂ 8 ಗಂಟೆಗಳ ಕಾಲ ಅವನ ಶವದ ಪಕ್ಕವೇ ಕುಳಿತ ಕಾಲ ಕಳೆದಿದ್ದಾಳೆ. ಬಳಿಕ ರಾತ್ರಿ ಸಮಯದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಆತನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ.










