ಅಫ್ತಾಬ್‍ಗೆ ಮರಣ ದಂಡನೆ ವಿಧಿಸಿ – ಶ್ರದ್ಧಾಳ ತಂದೆ ಆಗ್ರಹ…

74
firstsuddi

ನವದೆಹಲಿ : ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ತನ್ನ ಗೆಳೆಯನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಶ್ರದ್ಧಾಳ ಕೊಲೆ ಪ್ರಕರಣ ಸಂಬಂಧ ಇದೀಗ ಶ್ರದ್ಧಾಳ ತಂದೆ ಆರೋಪಿ ಅಫ್ತಾಭ್ ಗೆ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಪ್ರಕರಣದ ಹಿಂದೆ ಲವ್ ಜಿಹಾದ್ ಇರುವಂತಿದೆ ಎಂದು ನನಗೆ ಅನುಮಾನವಿದೆ. ದೆಹಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ನಾವು ನಂಬಿದ್ದೇವೆ. ಶ್ರದ್ಧಾ ಆಕೆಯ ಚಿಕ್ಕಪ್ಪನ ಸಂಪರ್ಕದಲ್ಲಿ ಹೆಚ್ಚಿದ್ದಳು. ನನ್ನನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಇದರಿಂದಾಗಿ ನಾನು ಅಫ್ತಾಬ್ ನೊಂದಿಗೆ ಎಂದಿಗೂ ಸಂಪರ್ಕದಲ್ಲಿರಲಿಲ್ಲ ಎಂದ ಅವರು, ತನ್ನ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್ ಗೆ ಮರಣ ದಂಡನೆ ವಿಧಿಸಬೇಕು ಜೊತೆಗೆ ಲವ್ ಜಿಹಾದ್ ಆಯಾಮದಲ್ಲೂ ತನಿಖೆ ಮಾಡಬೇಕು ಎಂದು ಕೋರಿದ್ದಾರೆ.

ಆರೋಪಿ ಅಫ್ತಾಬ್ ಪೂನಾವಾಲಾ ದೆಹಲಿಯ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಜೊತೆಗೆ ಆತ ಫುಡ್ ಬ್ಲಾಗರ್ ಕೂಡಾ ಆಗಿದ್ದ. ಅಫ್ತಾಬ್ ಹಾಗೂ ಶ್ರದ್ಧಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಅದಾದ ಬಳಿಕ ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್ ನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಳು.

ಪೊಲೀಸ್ ಮೂಲಗಳ ಪ್ರಕಾರ, 2009ರಿಂದ ಸಂಬಂಧ ಹೊಂದಿದ್ದ ಈ ಜೋಡಿ 2022ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಅವರು ಮಾರ್ಚ್-ಏಪ್ರಿಲ್ನಲ್ಲಿ ಬೇರೆ ಬೇರೆ ಪ್ರದೇಶಗಳಿಗೂ ಭೇಟಿ ನೀಡಿದ್ದರು. ಅದಾದ ಬಳಿಕ ದೆಹಲಿಯ ಛತ್ತರ್ ಪುರ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದು ವಾಸಿಸಲು ಪ್ರಾರಂಭಿಸಿದ್ದರು. ಈ ವೇಳೆ ಮದುವೆ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ.

ಈ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್ ನಲ್ಲಿಟ್ಟಿದ್ದ. ಅದಾದ ಬಳಿಕ ಶ್ರದ್ಧಾಳ ದೇಹದ ಭಾಗಗಳನ್ನು ದೆಹಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದ. ಯಾರಿಗೂ ಅನುಮಾನ ಬಾರದಿರಲಿ ಎಂದು ಶ್ರದ್ಧಾ ಸಾಮಾಜಿಕ ಜಾಲತಾಣದ ಖಾತೆಯನ್ನು ಬಳಸಿ ಬೇರೆಯವರಿಗೆ ಆಕೆ ಸಕ್ರಿಯವಾಗಿದ್ದಾಳೆ ಎಂಬಂತೆ ತೋರಿಸಿದ್ದಾನೆ.

ಈ ಮಧ್ಯೆ ಅಂದರೆ ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ ಅಫ್ತಾಬ್ ಅದೇ ಡೇಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿಯನ್ನು ಭೇಟಿಯಾಗಿ ಡೇಟ್ ಮಾಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೇ ಅಫ್ತಾಬ್ ಆ ಯುವತಿಯನ್ನು ಆಗಾಗ ಮನೆಗೂ ಕರೆ ತಂದು ಸೆಕ್ಸ್ ಮಾಡುತ್ತಿದ್ದ. ಆದರೆ ಆ ಮಹಿಳೆಯನ್ನು ಕರೆತರುವ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್ ನಿಂದ ತೆಗೆದು ಕಬೋರ್ಡ್ ನಲ್ಲಿ ಇಡುತ್ತಿದ್ದ ಎಂಬ ವಿಷಯ ಕೂಡ ಬಯಲಾಗಿದೆ.

ಎರಡು ತಿಂಗಳಿಗೂ ಹೆಚ್ಚು ಕಾಲ ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದಾಗ ಆಕೆಯ ಸ್ನೇಹಿತರು ಅನುಮಾನಗೊಂಡು ಶ್ರದ್ಧಾಳ ಪೋಷಕರಿಗೆ ತಿಳಿಸಿದ್ದರು. ಅದಾದ ಬಳಿಕ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.