ಕನ್ನಡದ ಅಮೃತವರ್ಷಿಣಿ ಸೇರಿದಂತೆ ದಕ್ಷಿಣ ಭಾರತದ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಶರತ್ ಬಾಬು ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶರತ್ ಬಾಬು ಅವರನ್ನು ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್ನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರಿಸಿ ಶರತ್ ಬಾಬು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳು ಫಲನೀಡದೆ ಶರತ್ ಬಾಬು ಇಹಲೋಕ ತ್ಯಜಿಸಿದ್ದಾರೆ.
ಶರತ್ ಬಾಬು ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
ಆಂಧ್ರಪ್ರದೇಶದ ಅಮದಾಲವಲಸದಲ್ಲಿ ಸತ್ಯಂ ಬಾಬು ದೀಕ್ಷಿತುಲು ಎಂಬ ಹೆಸರಿನಿಂದ ಜನಿಸಿದ ಶರತ್ ಬಾಬು 1973 ರಲ್ಲಿ ತೆಲುಗು ಸಿನಿಮಾರಂಗ ಪ್ರವೇಶ ಮಾಡಿದರು. ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಜನಪ್ರಿಯ ನಟನಾಗಿರುವ ಶರತ್ ಬಾಬು ನಾಯಕನಾಗಿ, ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ. ರಜನೀಕಾಂತ್ ಜೊತೆಗೆ ಮುತ್ತು, ಅರುಣಾಚಲಂ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತಮ್ಮ 40 ವರ್ಷದ ಸಿನಿ ಬದುಕಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಪಾತ್ರಗಳಲ್ಲಿ ಶರತ್ ಬಾಬು ನಟಿಸಿದ್ದಾರೆ.
ಕೇವಲ ತಮಿಳು ಮತ್ತು ತೆಲುಗು ಮಾತ್ರವಲ್ಲದೇ ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
1974ರಲ್ಲಿ ರಮಾ ಪ್ರಭ ಜೊತೆ ವಿವಾಹವಾಗಿದ್ದ ಶರತ್ ಬಾಬು 1988ರಲ್ಲಿ ವಿಚ್ಛೇದನ ಪಡೆದು ದೂರ ಆದರು. ಬಳಿಕ 1990ರಲ್ಲಿ ಸ್ನೇಹ ನಂಬಿಯಾರ್ ಜೊತೆ 2ನೇ ವಿವಾಹವಾದರು. ಆದರೆ 2011ರಲ್ಲಿ ಸ್ನೇಹ ಅವರಿಂದನೂ ದೂರ ಆದರು. ಒಂಟಿಯಾಗಿದ್ದ ಶರತ್ ಬಾಬು ಇತ್ತೀಚೆಗಷ್ಟೆ ಪತ್ರಕರ್ತೆಯೊಬ್ಬರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಇದೆ.










