ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಮೃತಪಟ್ಟಿದ್ದಾರೆ : ಸಚಿವ ಸುಧಾಕರ್.

127
firstsuddi

ಚಾಮರಾಜನಗರ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 24 ರೋಗಿಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ಇಂದು ಸಂಭವಿಸಿರುವ ಘಟನೆ ಬಹಳ ದುಃಖಕರವಾಗಿದ್ದು, ಮೃತರ ಕುಟುಂಬಗಳೊಂದಿಗೆ ರಾಜ್ಯ ಸರ್ಕಾರವಿದೆ. ಈಗಾಗಲೇ ಘಟನೆಯ ತನಿಖೆಗೆ ಸಿಎಂ ಆದೇಶ ನೀಡಿದ್ದಾರೆ. ನಿನ್ನೆ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಇವರು ಕೋವಿಡ್ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಮಧ್ಯರಾತ್ರಿ 12 ರಿಂದ ಬೆಳಗ್ಗೆ 3ಗಂಟೆವರೆಗೆ 3 ಮಂದಿ ಸಾವನ್ನಪ್ಪಿದ್ದು, ಮುಂಜಾನೆ 3 ರಿಂದ 7ರವರೆಗೆ 7 ಜನ ಸಾವನ್ನಪ್ಪಿದ್ದು, 24 ಗಂಟೆಯಲ್ಲಿ ಒಟ್ಟು 23 ಜನರು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 24 ಮಂದಿ ಮೃತಪಟ್ಟಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು, ಈ ದುರಂತ ಸಂಭವಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಪ್ರತಿಯೊಬ್ಬರ ಸಾವು ನಮಗೆ ದೊಡ್ಡ ನಷ್ಟ. ಆಮ್ಲಜನಕ ಕೊರತೆಯಿಂದ ಈ ಸಾವು ಸಂಭವಿಸಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಎಲ್ಲಾ ಸಾವುಗಳು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿಲ್ಲ. ಕೋವಿಡ್ ನಿಂದಲೇ ಕೊನೆ ಹಂತದಲ್ಲಿ ದಾಖಲಾಗಿದ್ದವರೂ ಇದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.