ಆಷಾಢ ಮಾಸ ಮೊದಲ ಶುಕ್ರವಾರ – ಚಾಮುಂಡಿ ಬೆಟ್ಟಕ್ಕೆ ಹರಿದುಬಂದ ಜನಸಾಗರ…

54
firstsuddi

ಮೈಸೂರು : ಇಂದು ಆಷಾಢ ಮಾಸದ ಮೊದಲ ಶುಕ್ರವಾರ. ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದೇವಾಲಯದ ಒಳಾವರಣವು ವಿವಿಧ ಪುಷ್ಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ.

ಭಕ್ತರಿಗೆ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಂಜಾನೆ 5.30ರಿಂದ ರಾತ್ರಿ 9.30ರವರೆಗೆ ದರ್ಶನಕ್ಕೆ ಅವಕಾಶವಿದೆ. ತಾಯಿ ಚಾಮುಂಡಿ ದರ್ಶನಕ್ಕೆ ಬರುವ ಭಕ್ತರು ಎರಡು ಡೋಸ್ ಕೊರೋನಾ ಲಸಿಕೆ ಕಡ್ಡಾಯ ಹಾಕಿಸಿರಬೇಕು. ಇಲ್ಲದಿದ್ದರೆ 72 ಗಂಟೆ ಮುಂಚಿತವಾದ ಕೋವಿಡ್ ನೆಗೆಟಿವ್ ರೀಪೋರ್ಟ್ ಇರಬೇಕು. ಹಾಗಿದ್ದರೆ ಮಾತ್ರ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ಅವಕಾಶ ಇರಲಿದೆ.

ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಬೆಟ್ಟಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಲಲಿತ್ ಮಹಲ್ ಮೈದಾನದಿಂದ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಆವರಣದಲ್ಲಿ ದಾನಿಗಳು ಭಕ್ತರಿಗೆ ಬಾಳೆಲೆ ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪ್ರಸಾದ ರೂಪದಲ್ಲಿ ಹಾರ್ಲಿಕ್ಸ್, ಮೈಸೂರು ಪಾಕ್ ವಿತರಣೆ ಮಾಡಲು ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ಮುಂದಾಗಿದೆ.