ಆಸ್ಕರ್ ನಿಧನ ಇಡೀ ರಾಷ್ಟ್ರ ರಾಜಕಾರಣಕ್ಕೆ ಬಹುದೊಡ್ಡ ನಷ್ಟ : ಡಿ.ಕೆ. ಶಿವಕುಮಾರ್.

76
firstsuddi

ಉಡುಪಿ : ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಅಧಿಕಾರ ನಿಭಾಯಿಸಿದ ಆಸ್ಕರ್ ಅವರ ಮೇಲೆ ಯಾರಿಗೂ ಆರೋಪ ಹೊರಿಸಲು ಸಾಧ್ಯವಾಗಿಲ್ಲ. ಅಷ್ಟರಮಟ್ಟಿಗೆ ಪಾರದರ್ಶಕವಾಗಿ ತಮಗೆ ಸಿಕ್ಕ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಕೇಂದ್ರ ಹಾಗೂ ರಾಜ್ಯಕ್ಕೆ ರಾಜಕೀಯ ಕೊಂಡಿಯಂತಿದ್ದ ಆಸ್ಕರ್ ನಿಧನ ಇಡೀ ರಾಷ್ಟ್ರ ರಾಜಕಾರಣಕ್ಕೆ ಬಹುದೊಡ್ಡ ನಷ್ಟ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಇಂದು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ನನಗೂ ಆಸ್ಕರ್ ಫೆರ್ನಾಂಡಿಸ್ ಅವರಿಗೂ ಸುಮಾರು 42 ವರ್ಷಗಳ ನಂಟಿದೆ. ಇಡೀ ದೇಶದ ಉದ್ದಗಲಕ್ಕೂ ಅಜಾತಶತ್ರುವಾಗಿ, ಓರ್ವ ಸರಳ-ಸಜ್ಜನಿಕೆಯ ನಾಯಕನಾಗಿ, ಯಾರ ಮನಸ್ಸು ನೋಯಿಸದೆ ಪಕ್ಷದಲ್ಲಿ ಪ್ರಾಮಾಣಿಕ ನಾಯಕನಾಗಿ ಗುರುತಿಸಿಕೊಂಡಿದ್ದರು. ಬೆಂಗಳೂರು-ಮೈಸೂರು ದಶ ಪಥ ರಸ್ತೆಗೆ ಅಂಕಿತ ಹಾಕಿದ್ದೆ ಆಸ್ಕರ್ ಫರ್ನಾಂಡಿಸ್. ಕಾರ್ಮಿಕ ಸಚಿವರಾಗಿದ್ದ ಕಾಲದಲ್ಲಿ ತಂದಂತಹ ಕ್ರಾಂತಿಕಾರಿ ಬದಲಾವಣೆಗಳು ಕಳೆದ ಅರವತ್ತು ವರ್ಷಗಳಲ್ಲಿ ಯಾರೂ ಕೂಡ ಯೋಚನೆ ಮಾಡಿರಲಿಕ್ಕಿಲ್ಲ್ಲ. ಕಾರ್ಮಿಕರ ಮಕ್ಕಳಿಗೆ ಎಂಬಿಬಿಎಸ್ ಸೀಟು, ಎಲ್ಲಾ ಇಎಸ್ಐ ಆಸ್ಪತ್ರೆಗಳನ್ನು ಮೆಡಿಕಲ್ ಕಾಲೇಜಾಗಿ ಪರಿವರ್ತನೆ ಮಾಡಿ ಕಾರ್ಮಿಕರ ಮಕ್ಕಳನ್ನು ಮೆಡಿಕಲ್ ಕಾಲೇಜಿಗೆ ಉಚಿತ ಸೇರ್ಪಡೆ ಮಾಡುವ ಅವಕಾಶಗಳನ್ನು ಕಲ್ಪಿಸಿದ್ದರು ಎಂದು ಹೇಳಿದರು.