ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾ ಪಂಚಾಯತ್ ಸಿಇಒಗಳ ಜತೆ ಸಭೆ ನಡೆಸಿದರು. ನಾಲ್ಕು ತಿಂಗಳಲ್ಲಿ ಪೂರ್ಣವಾಗುವ ಕೆಲಸವನ್ನು 12 ತಿಂಗಳವರೆಗೆ ಎಳೆಯುತ್ತೀರಿ. ಇಂದಿನಿಂದ ನಿಮ್ಮ ಕಾರ್ಯವೈಖರಿ ಬದಲಾಗಬೇಕು . ಜನರಿಗೆ ನಿಮ್ಮ ಮೇಲೆ ವಿಶ್ವಾಸ ಬರುವಂತೆ ಕೆಲಸ ಮಾಡಿ ಎಂದು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಎಚ್ಚರಿಕೆ ರವಾನಿಸಿದರು.
ಜಿಲ್ಲಾ ಪಂಚಾಯತ್ ಸಿಇಒಗಳೇ ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ. ಇದರಲ್ಲಿ ಎಷ್ಟು ಜನ ಗ್ರಾಮಗಳಿಗೆ ಭೇಟಿ ನೀಡಿದ್ದೀರಿ? ಎಷ್ಟು ಜನ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿದ್ದೀರಿ ಎಂದು ಸಾಲು ಸಾಲು ಪ್ರಶ್ನೆ ಮಾಡಿದರು. ಮೊದಲು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲ್ಲಾವಾದ್ರೆ ಪಿಡಿಒಗಳೇ ಹೆದರಲ್ಲ. ಕೆಳ ಹಂತದ ಅಧಿಕಾರಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ ಮತ್ತು ಅಧಿಕಾರದ ವಿಕೇಂದ್ರಿಕರಣ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನಿಮ್ಮನ್ನು ಹೇಳೋರು ಕೇಳೋರು ಯಾರು ಇಲ್ಲ ಅಂತ ತಿಳಿದುಕೊಳ್ಳಬೇಡಿ. ನನ್ನ ಕಾರ್ಯವೈಖರಿಯೇ ಬೇರೆ. ಎಲ್ಲವನ್ನು ನಾನು ಗಮನಿಸುತ್ತಿರುತ್ತೇನೆ. ಶಾಲಾ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಒಂದು ಜಿಲ್ಲೆಯಲ್ಲಿ ಸುಮಾರು 3 ಲಕ್ಷದಷ್ಟು ಮಕ್ಕಳಿವೆ. ಈ ವಿಷಯವನ್ನು ಯಾರು ಗಂಭೀರವಾಗಿ ತೆಗೆದುಕೊಂಡಿದ್ದೀರಿ. ಒಂದು ವೇಳೆ ಮಕ್ಕಳಿಗೆ ಏನಾದ್ರೂ ಆದ್ರೆ ಯಾರು ಜವಾಬ್ದಾರಿ ಎಂದು ಎಲ್ಲರನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಕಲ್ಯಾಣ ಕರ್ನಾಟಕದ ಶಿಶು ಮತ್ತು ತಾಯಿ ಮರಣ ಪ್ರಮಾಣ ಮತ್ತು ಅಪೌಷ್ಠಿಕತೆ ಬಗ್ಗೆ ಪ್ರಶ್ನೆ ಕೇಳಿದ ಮುಖ್ಯಮಂತ್ರಿಗಳು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರೋದು ನಿಮ್ಮ ಜವಾಬ್ದಾರಿ. ಕಳೆದ 30 ವರ್ಷಗಳಿಂದ ಯೋಜನೆ ಜಾರಿಯಲ್ಲಿದ್ರೂ, ಫಲಾನುಭವಿಗಳಿಗೆ ಪರಿಹಾರ ಸಿಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದ್ರೆ ಮಾತ್ರ ನಮ್ಮ ಕಲ್ಪನೆಯ ನವ ಕರ್ನಾಟಕ ನಿರ್ಮಾಣ ಆಗಲು ಸಾಧ್ಯ. ಸಾರ್ವಜನಿಕರ ಸಮಸ್ಯೆ ಅಹವಾಲುಗಳನ್ನು ತ್ವರಿತವಾಗಿ ಸ್ಪಂದಿಸಬೇಕು. ರೈತರು ದೀನ ದಲಿತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಸಿಗಬೇಕು. ಇದರಲ್ಲಿ ರಾಜಿ ಆಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಪರಿಹರಿಸಲು ಪ್ರತ್ಯೇಕ ಘಟಕ ಆರಂಭಿಸಿ. ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಅದರಿಂದ ನಿಮಗೂ ತೃಪ್ತಿ. ಜನಸಾಮಾನ್ಯರಿಗೆ ಆಡಳಿತದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಸರ್ಕಾರ ತಮ್ಮ ಪರ ಇರುತ್ತದೆ ಎಂದು ತಿಳಿಸಿದರು.










