ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹುತಾತ್ಮರಾಗಿಲ್ಲ ; ಅದೊಂದು ಆಕಸ್ಮಿಕವಷ್ಟೇ : ಉತ್ತರಾಖಂಡ ಸಚಿವ

53
firstsuddi

ಡೆಹ್ರಾಡೂನ್ : ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹುತಾತ್ಮರಾಗಿಲ್ಲ ಅದೊಂದು ಆಕಸ್ಮಿಕವಷ್ಟೇ ಎಂದು ಉತ್ತರಾಖಂಡ ಸಚಿವ ಗಣೇಶ್ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಬುದ್ಧಿಮತ್ತೆಗೆ ವಿಷಾದಿಸುತ್ತೇನೆ. ಆದರೆ ಹುತಾತ್ಮ ಪಟ್ಟ ಗಾಂಧಿ ಕುಟುಂಬದ ಏಕಸ್ವಾಮ್ಯವಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್, ಸಾವರ್ಕರ್, ಚಂದ್ರಶೇಖರ್ ಆಜಾದ್ ಮುಂತಾದವರು ಬಲಿದಾನ ಮಾಡಿದ್ದಾರೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ತ್ಯಾಗವಲ್ಲ, ಆಕಸ್ಮಿಕ. ತ್ಯಾಗಕ್ಕೂ ಆಕಸ್ಮಿಕಕ್ಕೂ ವ್ಯತ್ಯಾಸವಿದೆ ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಸುಗಮವಾಗಿ ಮುಗಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಮೋದಿ ನೇತೃತ್ವದಲ್ಲಿ 370ನೇ ವಿಧಿಯನ್ನು ರದ್ದುಪಡಿಸದಿದ್ದರೆ ಹಾಗೂ ಜಮ್ಮು ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಮರಳದಿದ್ದರೆ ರಾಹುಲ್ ಗಾಂಧಿ ಅವರು ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ತಮ್ಮ ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯ ಬಗ್ಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದ ಕ್ಷಣಗಳನ್ನು ನೆನಪಿಸಿಕೊಂಡು, ಹಿಂಸಾಚಾರವನ್ನು ಪ್ರಚೋದಿಸುವವರಿಗೆ ಆ ನೋವು ಎಂದಿಗೂ ಅರ್ಥವಾಗುವುದಿಲ್ಲ ಎಂದು ಹೇಳಿದ್ದರು.