ಬೆಂಗಳೂರು : ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿಯನ್ನು ಘೋಸಿಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ “ ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಅನೇಕ ದೇಶಗಳು ಕರೋನ ಸಂಕಟದ ಅವಧಿಗೆ ಬಾಡಿಗೆ ವಿನಾಯಿತಿಯನ್ನು ಘೋಷಿಸಿವೆ. ದೆಹಲಿಯ ಸರಕಾರ ಮೂರು ತಿಂಗಳ ಬಾಡಿಗೆಯನ್ನು ತಾನೇ ಕೊಡುವ ಯೋಜನೆ ಘೋಷಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿಯನ್ನು ಸನ್ಮಾನ್ಯ ಪ್ರಧಾನಿ ಘೋಷಿಸಲು ಮನವಿ ಮಾಡಿಕೊಳ್ಳುತ್ತೇನೆ. ದೆಹಲಿ ಮುಂಬಯಿ ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿ ಮಾಡುವ ಹಾಗೂ ಇಲ್ಲಿನ ಸಂಸ್ಥೆಗಳಲ್ಲಿ ಓದುತ್ತಿರುವ ಅನೇಕ ಜನರ ಆರ್ಥಿಕ ಸ್ಥಿತಿ ನಾಜೂಕಾಗಿದೆ. ಇಂತಹ ಸಂದರ್ಭದಲ್ಲಿ ಮನೆ, ಪಿಜಿ, ಹಾಸ್ಟೆಲ್ ಮಾಲೀಕರು ಎಂದಿನಂತೆ ಬಾಡಿಗೆ ವಸೂಲಿಗೆ ಇಳಿಯದೆ ಉದಾರತೆ ತೋರಲಿ. ಸರಕಾರ ಬಾಡಿಗೆ ವಿನಾಯಿತಿ ಘೋಷಿಸಿ ಜನಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸಬೇಕು. ಆರ್ಥಿಕ ಚಟುವಟಿಕೆ ಸಮಗ್ರವಾಗಿ ಸ್ಥಗಿತಗೊಂಡ ಈ ದಿನಗಳಲ್ಲಿ ಎಂದಿನಂತೆ ಪ್ರತಿ ತಿಂಗಳು ಮನೆ ಬಾಡಿಗೆಯನ್ನು ಕೊಡಲೇಬೇಕು ಅಂತ ಮಾಲೀಕರು ಪಟ್ಟು ಹಿಡಿದರೆ ಆರ್ಥಿಕ ಹೊರೆಯನ್ನು ತಾಳಲಾರದ ಬಾಡಿಗೆದಾರ ಇನ್ನೊಂದು ಮನೆ ಹುಡುಕಿಕೊಂಡು ಹೋಗುವ ಸ್ಥಿತಿಯೂ ಇಲ್ಲವಾದ್ದರಿಂದ,ಕೇಂದ್ರ ಸರಕಾರ ಈ ಕೂಡಲೇ ಬಾಡಿಗೆ ವಿನಾಯಿತಿ ಯೋಜನೆಯನ್ನು ಘೋಷಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.










