ಬೆಂಗಳೂರು : ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸಿದೆ. ಈ ಮಧ್ಯೆ ಕರ್ನಾಟಕದ 10 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸರ್ಕಾರ ನೀಡಿದ ಮಾಹಿತಿಯಂತೆ ಉಕ್ರೇನ್ ನಲ್ಲಿರುವ ಭಾರತೀಯರು ತಂಡಗಳಾಗಿ ದೇಶಕ್ಕೆ ಮರಳುತ್ತಿದ್ದಾರೆ. ಕೊನೆಯ ತಂಡವು ಬಸ್ ನಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಅಷ್ಟರೊಳಗೆ ವಿಮಾನಗಳ ಸಂಚಾರ ಸ್ಥಗಿತವಾಗಿ ಮರು ಪ್ರಯಾಣ ಸಾಧ್ಯವಾಗಿಲ್ಲ. ಉಕ್ರೇನ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 100 ಭಾರತೀಯರ ಪೈಕಿ ರಾಜ್ಯದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದು, ಸುರಕ್ಷಿತವಾಗಿ ಕರತೆರುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಈ ವಿಚಾರ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರ, ವಿದೇಶಾಂಗ ಕಾರ್ಯದರ್ಶಿ ಹಾಗೂ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಜೊತೆಗೆ ಸಂಪರ್ಕ ಸಾಧಿಸಿದ್ದು, ವಿದೇಶಾಂಗ ಸಚಿವರೊಂದಿಗೆ ಮಾತನಾಡಲು ಪ್ರಯತ್ನಿಸಲಾಗುತ್ತಿದೆ. ಸುರಕ್ಷಿತ ಸ್ಥಳದ ಕುರಿತು ಅಲ್ಲಿನ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ ಎಂದು ಸಿಎಂ ಹೇಳಿದರು.










