ಉಪಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ ಬೊಮ್ಮಾಯಿ.

94
firstsuddi

ಬೆಂಗಳೂರು : ಹಾನಗಲ್ ಹಾಗೂ ಸಿಂದಗಿ ಉಪಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಹುಬ್ಬಳ್ಳಿಗೆ ತೆರಳುವ ಮುನ್ನ ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಗೆಲುವಾಗಿದೆ ಮತ್ತೊಂದು ಕಡೆ ಸೋಲಾಗಿದೆ. ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವ ದೃಷ್ಟಿಕೋನ ನನ್ನದು. ಗೆಲುವಿಗೆ ಕಾರಣರಾದ ನಮ್ಮ ನಾಯಕರಿಗೆ, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲಾದ ಕ್ಷೇತ್ರದ ಬಗ್ಗೆ ನಾವು ಆತ್ಮ ವಿಮರ್ಶೆ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸಿ ಮುಂದೆ ಹೋಗಲಿದ್ದೇವೆ ನಮ್ಮ ಹಿರಿಯ ನಾಯಕ ಸಿಎಂ ಉದಾಸಿ ಅವರ ಬೇಸ್ ಅನ್ನು ನಾವು ಕ್ಷೇತ್ರದಲ್ಲಿ ಮುಂದುವರಿಸಿಕೊಂಡು ಹೋಗಲು ಸ್ವಲ್ಪಮಟ್ಟಿಗೆ ಆಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ, ಜನ ಅವರಿಗೆ ಮನ್ನಣೆ ಹಾಕಿದ್ದಾರೆ. ಎಂದರು.

ಮುಂದಿನ ಚುನಾವಣೆಗೆ ಉಪಚುನಾವಣೆ ಫಲಿತಾಂಶ ದಿಕ್ಸೂಚಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಂಧಗಿಯಲ್ಲಿ 31 ಸಾವಿರದಷ್ಟು ದೊಡ್ಡ ಅಂತರದಿಂದ ಕಾಂಗ್ರೆಸ್ ಸೋತಿದೆ. ಅದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಸಿಎಂ ಆಗಿ 100 ದಿನಗಳಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು, ಒಂದು ವರ್ಷದ ರೀತಿಯ ಪ್ರಮುಖವಾದ ಘಟ್ಟ ಅಲ್ಲ. ನೂರು ದಿನದಲ್ಲಿ ಯಾವ ದಿಕ್ಕಿನಲ್ಲಿ ನಮ್ಮ ಸರ್ಕಾರ ಹೋಗುತ್ತಿದೆ?. ಯಾವ ಯಾವ ಸಮಸ್ಯೆಗಳನ್ನು ಎದುರಿಸಿದೆ ಎಂಬ ಮಾಹಿತಿಯನ್ನು ಜನರಿಗೆ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದರು.