ಬೆಳಗಾವಿ : ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ರಾಜ್ಯ ಸರ್ಕಾರಕ್ಕೆ ತುಂಬಾ ಮಹತ್ವವಾಗಿದೆ. ಉಪ ಚುನಾವಣೆ ಎದುರಿಸುತ್ತಿರುವ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ. ಸುಪ್ರೀಂ ಕೋರ್ಟ್ ಆದೇಶ ಬಂದ ಬಳಿಕ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದ್ದು, ರಾಜ್ಯದ ಜನರು ಸಂಕಷ್ಟದಲ್ಲಿ ಇದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಜನರು ಬೇರೆ ಕಡೆ ಸ್ಥಳಾಂತರಗೊಳ್ಳಲು ಒಪ್ಪಿದರೆ ಎಲ್ಲಾ ಮೂಲಭೂತ ಸೌಕರ್ಯವನ್ನು ಒದಗಿಸಿ ಬೇರೆ ಕಡೆ ವಾಸ ಮಾಡಲು ಅನುಕೂಲವಾಗುವಂತೆ ಸ್ಥಳಾಂತರ ಮಾಡುತ್ತೇವೆ ಎಂದರು. ಇದೇ ವೇಳೆ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಹಿಂದಿನ ಸರ್ಕಾರ ಸಾಲಮನ್ನಾ ಮಾಡಿದ್ದೇ ಹೊರೆಯಾಗಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಯನ್ನು ನಮ್ಮ ಸರ್ಕಾರ ಮುಂದುವರೆಸುತ್ತದೆ. ಹೊಸದಾಗಿ ಸಾಲಮನ್ನಾ ಮಾಡುವ ಯೋಜನೆಯನ್ನು ಜಾರಿಗೆ ತರುವ ಪರಿಸ್ಥಿತಿ ಸರ್ಕಾರದ ಮುಂದೆ ಇಲ್ಲ ಎಂದರು.










