ಮೈಸೂರು : ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರು ನನಗೆ ಸಾಲ ಕೊಟ್ಟಿಲ್ಲ. ಬಿಜೆಪಿ ಅವರಿಗೆ ಆಪರೇಷನ್ ಕಮಲ ಮಾಡಲು ಹಣವನ್ನು ನೀಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಂಟಿಬಿ ಅವರಿಂದ ಸಾಲವನ್ನೇ ಪಡೆದಿಲ್ಲ. ಸಾಲ ಪಡೆಯದ ಮೇಲೆ ಏನನ್ನು ವಾಪಸ್ ಕೊಡುವುದು. ಲೋಕಸಭಾ ಚುನಾವಣೆಯ ವೇಳೆ ಕೃಷ್ಣಾ ಭೈರೇಗೌಡ ಅವರು ಸಾಲವನ್ನು ಪಡೆದಿದ್ದರು. ಅದನ್ನು ಅವರು ವಾಪಸ್ ನೀಡಿದ್ದಾರೆ. ಎಂಟಿಬಿ ನಾಗರಾಜು ಅವರು ಆಪರೇಷನ್ ಕಮಲ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಣವನ್ನು ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಎಂಟಿಬಿ ನಾಗರಾಜು ಮೇಲೆ ಪ್ರೀತಿ. ಎಂಟಿಬಿ ಯಡಿಯೂರಪ್ಪ ಅವರಿಂದ ಹಣವನ್ನು ಪಡೆದಿಲ್ಲ. ಎಂಟಿಬಿ ನಾಗರಾಜು ಅವರೇ ಯಡಿಯೂರಪ್ಪ ಅವರಿಗೆ ಹಣವನ್ನು ನೀಡಿದ್ದಾರೆ ಎಂದು ತಿರುಗೇಟು ನೀಡಿದರು. ನಿನ್ನೆ ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಎಂಟಿಬಿ ನಾಗರಾಜು ಅವರು, ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ. ಕೃಷ್ಣಭೈರೇಗೌಡ ಸಾಲ ಪಡೆದು ವಾಪಸ್ ನೀಡಿದ್ದಾನೆ. ಆದರೆ ಉಳಿದವರು ವಾಪಸ್ ನೀಡಿಲ್ಲ ಎಂದು ಆರೋಪಿಸಿದ್ದರು.










