ಬೆಂಗಳೂರು : ಎಂಟಿಬಿ ನಾಗರಾಜ್ ಅವರ ನಾಮಪತ್ರ ಸಲ್ಲಿಕೆ ವೇಳೆ ಅಭಿಮಾನಿಯೊಬ್ಬರು ತನ್ನ ಎದೆಯ ಬಲಭಾಗಕ್ಕೆ ಚಾಕುವಿನಿಂದ ಇರಿದುಕೊಂಡಿದ್ದಾರೆ. ಹೊಸಕೋಟೆಯ ಮುಗಬಾಳ ಕಡೆಯಿಂದ ಆಗಮಿಸಿದ ನೂರಾರು ಕಾರ್ಯಕರ್ತರು ಹೊಸಕೋಟೆ ಐಬಿ ಸಮೀಪದಿಂದ ತಾಲ್ಲೂಕು ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಎಂಟಿಬಿ ಮೇಲಿನ ಅಭಿಮಾನದಿಂದ ಮಂಜುನಾಥ್ ಎಂಬುವವರು ತಮ್ಮ ಎದೆಗೆ ತಾನೇ ಚಾಕುವಿನಿಂದ ಇರಿದುಕೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮಾತನಾಡಿದ ಮಂಜುನಾಥ್ ಅವರು ನಾನು ಎಂಟಿಬಿ ನಾಗರಾಜ್ ಅವರ ಅಭಿಮಾನಿ. ಅವರಿಗಾಗಿ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ. ಅವರು ಅಷ್ಟರ ಮಟ್ಟಿಗೆ ನಮ್ಮ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ಎಂಟಿಬಿ ಅವರು ಹೊಸಕೋಟೆ ಕ್ಷೇತ್ರವನ್ನು ಅಭಿವೃದ್ದಿ ಮಾಡುವುದಕ್ಕಾಗಿ ರಾಜೀನಾಮೆ ನೀಡಿದ್ದಾರೆಯೇ ಹೊರತು ಅವರ ಸ್ವಾರ್ಥಕ್ಕಾಗಿ ಅಲ್ಲ. ಅವರು ಯಾವುದೇ ಪಕ್ಷದವರಿಂದಲೂ ಹಣವನ್ನು ಪಡೆದಿಲ್ಲ ಎಂದರು. ಮೆರವಣಿಗೆಯಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಆರ್.ಅಶೋಕ್, ಮಾಜಿ ಸಚಿವ ಕಟ್ಟ ಸುಬ್ರಹ್ನಣ್ಯ ನಾಯ್ಡು, ಕೋಲಾರ ಸಂಸದ ಮುನಿಸ್ವಾಮಿ ಅವರು ಸೇರಿದಂತೆ ಇತರರು ಸಾಥ್ ನೀಡಿದರು.










