ಬೀದರ್: ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಎಟಿಎಂಗೆ ಹಾಕಲು ಸಾಗಿಸುತ್ತಿದ್ದ ಹಣವನ್ನು ಸಿನಿಮಾ ಶೈಲಿಯಲ್ಲಿ ಲೂಟಿ ಮಾಡಿ ಪರಾರಿಯಾದ ದುರಂತ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ. ಈ ವೇಳೆ ಎಸ್‍ಬಿಐ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ, ಗುಂಡು ಹಾರಿಸಿದ್ದರಿಂದ ಒಬ್ಬ ಸ್ಥಳದಲ್ಲೇ ಮೃತಪ್ಪಟ್ಟಿದ್ದಾರೆ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನ ಗಿರೀಶ್ ಎಂದು ಗುರುತಿಸಲಾಗಿದೆ. ಶಿವಾ ಕಾಶಿನಾಥ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ. ನಗರದ ಶಿವಾಜಿ ಸರ್ಕಲ್ ಬಳಿಯ ಹೃದಯ ಭಾಗದಲ್ಲಿರುವ ಎಸ್‍ಬಿಐ ಬ್ಯಾಂಕ್ ಮೇನ್ ಬ್ರ್ಯಾಂಚ್ ಮುಂದೆ ಘಟನೆ ಸಂಭವಿಸಿದೆ. ಬ್ಯಾಂಕಿನ ಕಚೇರಿ ಎದುರು ಗಿರೀಶ್ ಮೃತದೇಹ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡುಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಎಂದಿನಂತೆ ಬ್ಯಾಂಕ್‍ನಿಂದ ಎಟಿಎಂಗೆ ಹಣ ವರ್ಗಾಯಿಸಲು ವಾಹನದಲ್ಲಿ ಬಂದಿದ್ದರು. ಆಗ ಬೈಕಿನಲ್ಲಿ ಬಂದ ಅಪರಿಚಿತರು ಹಣ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಹಣ ಕೊಡದಿದ್ದಾಗ 6 ಸುತ್ತು ಫೈರಿಂಗ್ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.










