ಬೆಂಗಳೂರು : ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ಮೊದಲ ದಿನದ ಪಾದಯಾತ್ರೆ ನಿನ್ನೆ ಬಿಡದಿಗೆ ಅಂತ್ಯವಾಗಿತ್ತು. ಇಂದು 2ನೇ ದಿನದ ಕಾಂಗ್ರೆಸ್ ಪಾದಯಾತ್ರೆ ಬಿಡದಿಯಿಂದ ಕೆಂಗೇರಿವರೆಗೆ ನಡೆಯಲಿದ್ದು, ನಾಯಕರು ಇಂದು ಸುಮಾರು 20 ಕಿಲೋಮೀಟರ್ ನಡೆಯಲಿದ್ದಾರೆ.
ಪಾದಯಾತ್ರೆಗೂ ಮುನ್ನ ಡಿ ಕೆ ಶಿವಕುಮಾರ್, ಇಂದು ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಹೋರಾಟಗಾರರಿಗೆ ಯಾರ ಅನುಮತಿ ಬೇಕು. ಸಿಎಂ ಅವರಿಗೆ ತಿಳಿಸಿದ್ದೇವೆ. ಟ್ರಾಫಿಕ್ ಗಮನದಲ್ಲಿ ಇಟ್ಟುಕೊಂಡು ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಪಾದಯಾತ್ರೆ ಶುರು ಮಾಡುತ್ತೇವೆ ಎಂದೇ ನಿಯಮಗಳನ್ನ ಹಾಕುತ್ತಾರೆ ಎಂದು ಆರೋಪಿಸಿದರು.
ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಕಾಂಗ್ರೆಸ್ ನಾಯಕರ ಪಾದಯಾತ್ರೆ ಮತ್ತೆ ನಿನ್ನೆಯಿಂದ ಆರಂಭವಾಗಿದೆ. ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆ 2.Oಕ್ಕೆ ನಿನ್ನೆ ಚಾಲನೆ ಸಿಕ್ಕಿದ್ದು, 2ನೇ ಹಂತದ ಪಾದಯಾತ್ರೆ ಮಾರ್ಚ್ 3 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ನಿನ್ನೆ ರಾಮನಗರದಿಂದ ಶುರುವಾದ ಪಾದಯಾತ್ರೆ ಸಂಜೆ ಬಿಡದಿ ತಲುಪಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಬಿಡದಿಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಇಂದು ಸಂಜೆ ಕೆಂಗೇರಿ ತಲುಪುತ್ತದೆ.










