ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಏಕಾಂಗಿಯಾಗಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದಾರೆ. “ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ, ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ? ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ ಸದಾನಂದ ಗೌಡ ಬಗ್ಗೆ ಅನುಕಂಪ ಇದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು, ಅಂಕಿ ಅಂಶ ಹೀಗೆ ಎಲ್ಲ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ ‘ಗೊಬ್ಬರ’ವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸುತ್ತಿದೆ. ಏಕಾಂಗಿಯಾಗಿ ಹೋಗಿರುವ ಡಿ.ವಿ. ಸದಾನಂದ ಗೌಡ ಅವರನ್ನು ಬಿಜೆಪಿ ಪಕ್ಷದಲ್ಲಿ ಯಾರೂ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಅವರು ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಾ ಇರುತ್ತಾರೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.










