ಓದು ನಮ್ಮ ವ್ಯಕ್ತಿತ್ವ ರೂಪಿಸುತ್ತದೆ : ಟಿ.ಕೆ.ಪಣಿರಾಜ್

79
firstsuddi

ಚಿಕ್ಕಮಗಳೂರು: ಹೆತ್ತವರು ಮತ್ತು ಶಿಕ್ಷಕರು ಸಂತೋಷಪಡುವ ಹಾಗೆ ಅವರ ಮನಸ್ಸಿಗೆ ತೃಪ್ತಿಯಾಗುವ ರೀತಿ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಟಿ.ಕೆ.ಪಣಿರಾಜ್ ಸಲಹೆ ನೀಡಿದರು.

ನಗರದ ಮಾಡೆಲ್ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ಕಿಪ್ಲಿಂಗ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಲಾರ್ಡ್ ಬೇಡನ್ ಪೊವೆಲ್ ಹಾಗೂ ಲೇಡಿ ಬೇಡನ್ ಪೊವೆಲ್ ಜನ್ಮದಿನದ ಅಂಗವಾಗಿ ನಿನ್ನೆ ಆಯೋಜಿಸಿದ್ದ ವಿಶ್ವಚಿಂತನಾ ಮತ್ತು ಭ್ರಾತೃತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತಿ ಮುಖ್ಯ ಅದು ಬಹಳ ವೇಗವಾಗಿ ಕಳೆದುಹೋಗುತ್ತದೆ. ಹಾಗಾಗಿ ಅದನ್ನು ಖುಷಿಯಿಂದ ಅನುಭವಿಸಬೇಕು. ವಿದ್ಯಾರ್ಥಿದೆಸೆಯಲ್ಲಿ ಮೊಬೈಲ್ ನಿಂದ ಆದಷ್ಟು ದೂರವಿರಬೇಕು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮನುಷ್ಯ ಕ್ರಿಯಾಶೀಲನಾಗುತ್ತಾನೆ. ಓದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲ ಎಂ.ಎನ್.ಷಡಾಕ್ಷರಿ ಮಾತನಾಡಿ, ಭೂಮಿಗೆ ನಾವು ಬಂದಾಗ ಈ ಪ್ರಪಂಚ ಎಷ್ಟು ಸುಂದರವಾಗಿತ್ತೋ, ಅದಕ್ಕಿಂತಲೂ ಸ್ವಲ್ಪ ಸುಂದರವಾಗಿ ಮಾಡಿ ತೆರಳಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಅಂತಹ ವ್ಯಕ್ತಿಯನ್ನು ಸಮಾಜ ಸ್ಮರಿಸುತ್ತದೆ ಎಂದರು.

ಲಾರ್ಡ್ ಬೇಡನ್ ಪೊವೆಲ್ ಹಾಗೂ ಲೇಡಿ ಬೇಡನ್ ಪೊವೆಲ್ ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಓದಬೇಕು. ಅವರಂತೆ ಬದುಕುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ಜನ್ಮದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಉದ್ಯಮಿ ವೇಣುಗೋಪಾಲ ನಾಯ್ಡು, ನಿವೃತ್ತ ಮುಖ್ಯ ಶಿಕ್ಷಕಿ ವಿಶಾಲಾ ಷಡಾಕ್ಷರಿ, ಸ್ಕೌಟ್ಸ್ ಮತ್ತು ಗೈಡ್ಸ್‍ನ ತರಬೇತುದಾರರಾದ ಸಂಧ್ಯಾರಾಣಿ ಮುಖ್ಯ ಶಿಕ್ಷಕ ಯೋಗೀಶ್ ಉಪಸ್ಥಿತರಿದ್ದರು.