ಬೆಂಗಳೂರು : ಆಟವಾಡುವ ನೆಪದಲ್ಲಿ ಬಾಲಕನನ್ನು ಕರೆದುಕೊಂಡು ಹೋಗಿ ಆತನ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿರುವ ಘಟನೆ ನಗರದ ಮಾಗಡಿ ರೋಡ್ ನಲ್ಲಿ ನಡೆದಿದೆ.
ಮೇ 20ರಂದು ದಾಸನಪುರ ಹೋಬಳಿಯ ಚಿಕ್ಕವೀರಯ್ಯಪಾಳ್ಯ ನಿವಾಸಿಯಾಗಿರುವ ರಾಘವೇಂದ್ರ ಎಂಬುವರು ತಮ್ಮ ಸಂಬಂಧಿಕರ ಮದುವೆ ಹಿನ್ನೆಲೆ ಮಾಗಡಿ ರಸ್ತೆಯಲ್ಲಿರುವ ಸರಸ್ವತಿ ಕನ್ವೆಷನ್ ಹಾಲ್ ಗೆ ಹೆಂಡತಿ-ಮಕ್ಕಳ ಸಮೇತ ಬಂದಿದ್ದರು. ರಾಘವೇಂದ್ರ ಅವರ ಪುತ್ರ ಇತರೆ ಮಕ್ಕಳ ಜೊತೆಗೆ ಆಟವಾಡುತ್ತಿದ್ದ.
ಈ ಸಂದರ್ಭದಲ್ಲಿ ಆಗಮಿಸಿರುವ ಇಬ್ಬರು ಅಪರಿಚಿತರು ಕಣ್ಣಾಮುಚ್ಚಾಲೆ ಆಟ ಆಡೋಣ ಬಾ ಎಂದು ಕರೆದಿದ್ದಾರೆ. ಬಳಿಕ ಬಾಲಕನ ಗಮನ ಬೇರೆಡೆ ಸೆಳೆದು ಬಾಲಕನ ಮೈಮೇಲಿದ್ದ ಸುಮಾರು ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ.
ಪುತ್ರ ಆಳುತ್ತ ತನ್ನ ತಂದೆಯ ಬಳಿ ಬಂದಾಗ ಚಿನ್ನಭರಣ ಕಳವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಕಳವು ಮಾಡಿ ಪರಾರಿಯಾಗಿರುವ ದೃಶ್ಯ ಕಲ್ಯಾಣಮಂಟಪದಿಂದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










