ಬೆಳಗಾವಿ : ಕಣ್ಣಿಗೆ ಖಾರದ ಪುಡಿ ಎರಚಿ ಬಿಲ್ಡರ್ ವೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಗುರುಪ್ರಸಾದ್ ಕಾಲೊನಿಯಲ್ಲಿ ನಡೆದಿದೆ.
ಬಿಲ್ಡರ್ ರಾಜು ದೊಡ್ಡಬಣ್ಣವರ (46) ಕೊಲೆಯಾದ ವ್ಯಕ್ತಿ. ಬಸ್ತವಾಡ ಗ್ರಾಮದ ರಾಜು ಭವಾನಿ ನಗರದಲ್ಲಿ ವಾಸವಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ನೋಡಲು ಬೆಳಗ್ಗೆ ರಾಜು ತಮ್ಮ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ರಾಜು ಅವರ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ ಕಂಡ ವಾಯುವಿಹಾರ ಮಾಡುತ್ತಿದ್ದ ಸ್ಥಳೀಯರು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಹಳೇ ದ್ವೇಷ ಹಿನ್ನಲೆ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.










