ಬೆಂಗಳೂರು : ಪ್ರವಾಸೋಧ್ಯಮ, ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ. ರವಿ ಅವರ ಪ್ರತ್ಯೇಕವಾಗಿ ನಾಡಧ್ವಜದ ಅವಶ್ಯಕತೆ ಇಲ್ಲ ಎಂಬ ಹೇಲಿಕೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್‍ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಯಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ. ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ.ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ಬಿಜೆಪಿ ಕರ್ನಾಟಕ ಸರ್ಕಾರದ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾದುದು. ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜ ಹಾರಿಸಬೇಕೆಂದು ರಾಷ್ಟ್ರಧ್ವಜ ಸಂಹಿತೆ ಹೇಳಿದೆ. ಅದನ್ನು ಪಾಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಬೇರೇನು ಸಮಸ್ಯೆ ಇದೆ? ಹಿರಿಯರಾದ ಡಾ.ಪಾಟೀಲ ಪುಟ್ಟಪ್ಪ ಮತ್ತಿತರ ಕನ್ನಡ ಹೋರಾಟಗಾರರು ನಾಡಧ್ವಜಕ್ಕಾಗಿ ಮನವಿಮಾಡಿದ್ದರು. ಆ ಬಗ್ಗೆ ಅಧ್ಯಯನ ನಡೆಸಿದ್ದ ತಜ್ಞರ ಸಮಿತಿ ವಿನ್ಯಾಸ ಗೊಳಿಸಿದ್ದ ನಾಡಧ್ವಜಕ್ಕೆ ಮನ್ನಣೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದೆವು. ಈಗ ರಾಜ್ಯ ಸರ್ಕಾರವೇ ವಿರೋಧಿಸುತ್ತಿರುವುದು ಖಂಡನೀಯ. ಕನ್ನಡ ಮತ್ತು ಸಂಸ್ಕೃತಿ ಸಚಿವರು ನಾಡಧ್ವಜ ಅಗತ್ಯ ಇಲ್ಲ ಎಂದು ಹೇಳಿ ಕನ್ನಡಿಗರನ್ನು ಕೆರಳಿಸಿರುವುದು ಸರಿ ಅಲ್ಲ. ಮಾಡಬೇಕಾಗಿರುವ ಕೆಲಸ ಬಿಟ್ಟು ಸಚಿವರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಹೊರಟಂತಿದೆ. ಸಚಿವರು ತಕ್ಷಣ ತಮ್ಮ ಅಭಿಪ್ರಾಯವನ್ನು ಹಿಂದಕ್ಕೆ ಪಡೆದು ನಾಡಧ್ವಜವನ್ನು ಒಪ್ಪಿಕೊಳ್ಳಬೇಕು. ಸನ್ಮಾನ್ಯ ಸಿ.ಟಿ. ರವಿ ಅವರೇ, ನಾನು ಕಾಲು ಜಾರದ ಹಾಗೆ ಎಚ್ಚರದಿಂದ ನಾಲ್ಕು ದಶಕಗಳ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನೀವು ಇನ್ನೂ ಯುವಕರು, ಹೆಚ್ಚು ಸ್ಪೀಡಾಗಿ ಹೋಗ್ಬೇಡಿ, ಜೋಪಾನ. ಅಪಘಾತ ಮಾಡಿಬಿಟ್ಟರೆ ಎಲ್ಲ ಸಂದರ್ಭಗಳಲ್ಲಿಯೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.










