ಕಲಾಮಂದಿರದಲ್ಲಿ ಕಾಲಮಿತಿ ಯಕ್ಷಗಾನ- ಚೊಚ್ಚಲ ಪ್ರಯತ್ನದಲ್ಲೇ ಗಮನ ಸೆಳೆದ ಮಹಿಳೆಯರು…

92
firstsuddi

ಚಿಕ್ಕಮಗಳೂರು: ಸುಗಮ ಸಂಗೀತ ಗಂಗಾ, ಯಕ್ಷಗಾನ ಅಭಿಮಾನಿ ಬಳಗ, ಕಲ್ಕಟ್ಟೆ ಪುಸ್ತಕದ ಮನೆ, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಹಾಗೂ ಯಕ್ಷಸಿರಿ ನಾಟ್ಯವೃಂದದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ಮಹಿಳೆಯರಿಂದ ನಡೆದ ಸುದರ್ಶನ ಗರ್ವಭಂಗ ಯಕ್ಷಗಾನ ನೋಡುಗರ ಮನ ಗೆದ್ದಿತು.

ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಂದ ನಡೆದ ಪ್ರಸಂಗದಲ್ಲಿ ಹುಮ್ಮಸ್ಸಿನಿಂದ ಅಭಿನಯಿಸುವ ಮೂಲಕ ಮಹಿಳೆಯರು, ತಾವು ಪುರುಷರಿಗಿಂತ ಕಮ್ಮಿಯಿಲ್ಲ ಎಂಬುದನ್ನು ಚೊಚ್ಚಲ ಪ್ರಯತ್ನದಲ್ಲೇ ಸಾಬೀತು ಪಡಿಸಿದರು.

ಮಹಾ ವಿಷ್ಣುವಿನ ಶಸ್ತ್ರವಾದ ಸುದರ್ಶನನಿಗಿದ್ದ ವಿಷ್ಣುವಿನ ಗೆಲುವು, ನನ್ನಿಂದಲೇ ಎಂಬ ಗರ್ವವನ್ನು ಇಳಿಸುವ ಪ್ರಸಂಗದಲ್ಲಿ ಮಹಿಳಾ ಭಾಗವತರ ಕಂಚಿನ ಕಂಠದ ಗಾಯನ, ಪಾತ್ರಧಾರಿಗಳ ಪ್ರಾಸಬದ್ಧ, ಚುರುಕು ಸಂಭಾಷಣೆ, ನವಿರು ಹಾಸ್ಯ, ನೃತ್ಯ, ಮಿಂಚಿನ ಅಭಿನಯ ಪ್ರೇಕ್ಷಕರನ್ನು 3 ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಬಿಎಸ್‍ಎನ್‍ಎಲ್ ಉದ್ಯೋಗಿ ಪರಮೇಶ್ವರ್ ಗಮನ ಸೆಳೆದರೆ, ಕಲ್ಕಟ್ಟೆ ಪುಸ್ತಕದ ಮನೆಯ ವ್ಯವಸ್ಥಾಪಕಿ ರೇಖಾ ನಾಗರಾಜರಾವ್ ಸಂಯೋಜನೆ ಮತ್ತು ರಾಕ್ಷಸ ರಾಜ ಶತ್ರು ಪ್ರಸೂದನನ ಪಾತ್ರದಲ್ಲಿ ಪರಕಾಯಪ್ರವೇಶ ಮಾಡಿದವರಂತೆ ಅಭಿನಯಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಂಡರು.

ನಿವೃತ್ತ ಎ.ಎಸ್.ಐ ಸುರೇಶ್ ಭಟ್ ಅವರ ವಿದೂಷಕನ ಪಾತ್ರ, ಪ್ರಾಸಬದ್ಧ ಮಾತು, ನವಿರು ಹಾಸ್ಯಕಲಾಮಂದಿರದಲ್ಲಿ ನಗೆಯ ಬುಗ್ಗೆಗಳನ್ನೆಬ್ಬಿಸಿತು.

ಜಿಲ್ಲೆ ಮತ್ತು ನಗರದ ಪ್ರತಿಭೆಗಳಾದ ಜಯಪ್ರಕಾಶ್ ಹೆಬ್ಬಾರ್, ಶೋಭಾ ಪರಮೇಶ್ವರ್, ಮಹಾಲಕ್ಷ್ಮಿ ಹೆಗಡೆ, ಪ್ರತಿಭಾ ನಂದಕುಮಾರ್, ಕೆ.ಎಚ್.ಗೀತಾ, ಅಪೂರ್ವ ವೆಂಕಟೇಶ್, ಪೂರ್ಣಿಮಾ, ಅನಿರುದ್ಧ ಎಂ. ಕಾಕತ್ಕರ್, ವೈಷ್ಣವಿ ಎನ್. ರಾವ್, ಹಿಮಗಿರಿ ಮತ್ತು ಮಾಸ್ಟರ್ ದಕ್ಷತಮ್ಮ ಚೊಚ್ಚಲ ಅಭಿನಯದ ಮೂಲಕ ಗಮನ ಸೆಳೆದರು.

ಆಶಾಕಿರಣ ಅಂದ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಯಕ್ಷಸಿರಿ ನಾಟ್ಯವೃಂದ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಕಲಾವಿದರನ್ನು ಗೌರವಿಸಲಾಯಿತು.

ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್, ಸಾಂಸ್ಕೃತಿಕ ಸಂಘದ ಆನಂದ್‍ಕುಮಾರ್ ಶೆಟ್ಟಿ, ರಣಜಿತ್ ಸಿಂಗ್, ಆದಿಚುಂಚನಗಿರಿ ವಿವಿಯ ಕುಲಪತಿ ಡಾ.ಸಿ.ಕೆ. ಸುಬ್ರಾಯ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿಸ್ಲೇಹಳ್ಳಿ ಸೋಮಶೇಖರ್, ಲೋಕೇಶಪ್ಪ, ಕಲ್ಕಟ್ಟೆ ಪುಸ್ತಕದ ಮನೆಯ ಸಾಹಿತಿ ಎಚ್.ಎಂ. ನಾಗರಾಜರಾವ್, ಮಲ್ಲಿಗೆ ಟ್ರಸ್ಟ್‍ನ ಅಧ್ಯಕ್ಷ, ಗಾಯಕ ಮಲ್ಲಿಗೆ ಸುಧೀರ್, ಮಂಜುಳಾ ಮಹೇಶ್, ಯಕ್ಷಗಾನ ಅಭಿಮಾನಿ ಬಳಗದ ಕೆ.ಎನ್. ಮಂಜುನಾಥ ಭಟ್, ಶಂಕರನಾರಾಯಣ ಭಟ್ ಹಾಜರಿದ್ದರು.