ಕೊಪ್ಪಳ: ಕಲುಷಿತ ನೀರು ಸೇವಿಸಿ ಓರ್ವ ವೃದ್ಧೆ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ಹೊನ್ನಮ್ಮ ಶಿವಪ್ಪ (65) ಎಂದು ಗುರುತಿಸಲಾಗಿದೆ. ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಬಾಲಕ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಈಗ ಕೊಪ್ಪಳದಲ್ಲೂ ದುರ್ಘಟನೆಯೊಂದು ಸಂಭವಿಸಿದೆ.
ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ಸುಮಾರು ಮೂರು ದಿನಗಳಿಂದ ವಾಂತಿ- ಬೇದಿಯಿಂದ ಜನರು ಬಳಲುತ್ತಿದ್ದರು. ಕನಕಗಿರಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಜನ ದಾಖಲಾಗಿದ್ದು, ಗ್ರಾಮಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಕಲುಷಿತ ನೀರು ಪೂರೈಕೆ ಮಾಡಿದ ಗ್ರಾಮ ಪಂಚಾಯತ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಹಿಳೆ ಸಾವಿನ ಬಳಿಕ ದಿನದಿಂದ ದಿನಕ್ಕೆ ಗ್ರಾಮದಲ್ಲಿ ಅಸ್ವಸ್ಥಗೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆ ವೃದ್ಧೆ ಮೃತಪಟ್ಟಿದ್ದರೂ, ಆರೋಗ್ಯ ಇಲಾಖೆಯಾಗಲೀ ಅಥವಾ ಜಿಲ್ಲಾಡಳಿತದ ಅಧಿಕಾರಿಗಳಾಗಲೀ ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮವಹಿಸಿಲ್ಲ. ಜೊತೆಗೆ, ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಗೂ ವ್ಯವಸ್ಥೆ ಮಾಡಿಲ್ಲ. ಇನ್ನು ಅಸ್ವಸ್ಥಗೊಂಡವರ ಪ್ರಕರಣ ಹೆಚ್ಚಾಗುತ್ತಿದ್ದಂತೆ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿದೆ.










