ಕಳಸ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಲ್ಲಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.
ಕಳಸ ತಾಲ್ಲೂಕಿನ ಅತೀ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಭೂದಿಗುಂಡಿ ಪ್ರದೇಶಕ್ಕೆ ಬೇಟಿ ನೀಡಿದಾಗ ಅಲ್ಲಿ ಸಂಕಷ್ಟಕ್ಕೊಳಕ್ಕಾದ ಕುಟುಂಬಗಳು ತಮ್ಮ ಸಮಸ್ಯೆಗಳ ಸರಮಾಲೆಯನ್ನೆ ಸುರಿದರು.
ಅಲ್ಪ ಸ್ವಲ್ಪ ಜಮೀನು ಮಾಡಿಕೊಂಡು ಮನೆ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದ್ದೆವು. ಆದರೆ ಆ ದೇವರಿಗೆ ನಮ್ಮ ನೆಮ್ಮದಿ ಇಷ್ಟವಾಗಿಲ್ವೋ ಏನೋ ಕ್ಷಣ ಮಾತ್ರದಲ್ಲಿ ನಮ್ಮ ಬದುಕೇ ಸರ್ವನಾಶವಾಗಿದೆ. ಎಲ್ಲಾ ಮನೆ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಇರಲು ಮನೆಯಿಲ್ಲ. ತಿನ್ನಲು ಊಟವಿಲ್ಲ, ಕುಡಿಯಲು ನೀರಿಲ್ಲ, ಕೂಲಿ ಮಾಡೋಕೆ ಕೆಲಸವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಈ ಭಾಗ ಅಂದರೆ ಭೂದಿಗುಂಡಿ, ಚನ್ನಡ್ಲು, ಮಲ್ಲೇಶನಗುಡ್ಡ ವಾಸ ಮಾಡಲು ಯೋಗ್ಯವಾದ ಸ್ಥಳವೇ ಅಲ್ಲ. ನಮಗೆ ವಾಸ ಮಾಡಲು ಬೇರೆ ಭೂಮಿಯನ್ನು ನೀಡುವ ವ್ಯವಸ್ಥೆಯಾಗಬೇಕು. ಭೂಮಿ ನೀಡಿ ಮನೆ ಕಟ್ಟಿಕೊಟ್ಟರೆ ನಾವು ಹೇಗಾದರೂ ಜೀವನ ಸಾಗಿಸುತ್ತೇವೆ ಎಂದು ನಿರಾಶ್ರಿತರು ಕೇಳಿಕೊಂಡರು.
ಮನೆ ಕುಸಿತಗೊಂಡು ಅದರಡಿ ಬಿದ್ದು ಮೃತರಾದ ಸಂತೋಷ್ ತಾಯಿವರನ್ನು ಸಂತೈಯಿಸಿ ಸಂತ್ರಸ್ಥರಿಗೆ ದೈರ್ಯ ತುಂಬಿದ ಮಾಜಿ ಮುಖ್ಯಮಂತ್ರಿ ಮೃತರಾದ ಕುಟುಂಬಗಳಿಗೆ ಸರ್ಕಾರದಿಂದ ಏನು ಸವಲತ್ತುಗಳು ಸಿಗಬೇಕೋ ಅದು ಸಿಗುವಂತೆ ಸರ್ಕಾರದ ಗಮನಕ್ಕೆ ತರುತ್ತೇನೆ. ನೆರೆಪೀಡಿತ ಎಲ್ಲಾ ಪ್ರದೇಶಗಳಿಗೂ ಬೇಟಿ ನೀಡುತ್ತಿದ್ದೇನೆ. ಅಲ್ಲಿ ಆಗಿರುವ ಅನಾಹುತಗಳ ಬಗ್ಗೆ ಸಂಪೂರ್ಣ ವರದಿಯನ್ನು ನಮ್ಮ ಕಡೆಯಿಂದ ತಯಾರಿಸಿ ಸೂಕ್ತವಾದ ಪರ್ಯಾಯ ವ್ಯವಸ್ಥೆ ಮತ್ತು ಪರಿಹಾರಗಳನ್ನು ನೀಡುವ ಬಗ್ಗೆ ಸರ್ಕಾರದ ಮುಂದಿಡುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಬೇಟಿ ನೀಡುವ ಮುನ್ನ ಶ್ರೀ ಕ್ಷೇತ್ರ ಹೊರನಾಡಿಗೆ ಬೇಟಿ ನೀಡಿ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಳಸ ತಾಲ್ಲೂಕಿನಾಧ್ಯಂತ ಆದ ಪ್ರವಾಹ ಅದರಿಂದ ಆಗಿರುವ ಹಾನಿಯ ಬಗ್ಗೆ ಮಾಜಿ ಮುಖ್ಯಮಂತ್ರಿಗಳ ಗಮನಸೆಳೆದರು.
ಈ ಸಂದರ್ಭದಲ್ಲಿ ಸ.ರಾ.ಮಹೇಶ್, ಬೋಜೇಗೌಡ, ಧರ್ಮೇಗೌಡ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಅಜಿತ್ ರಂಜನ್ ಕುಮಾರ್, ತಾ.ಪಂ ಸದಸ್ಯ ಮಹಮ್ಮದ್ ರಫೀಕ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ, ಮುಖಂಡರಾದ ಮಂಜಪ್ಪಯ್ಯ, ರವಿರೈ, ಆಶಾಲತ ಜೈನ್, ಪ್ರಸಾದ್ ಬಲಿಗೆ ಇತರರು ಇದ್ದರು.










