ಕಳಸ : ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ವೈದ್ಯರು ಕುಡಿದು ಕರ್ತವ್ಯ ನಿರ್ವಹಿಸುತ್ತಿರುವುದಲ್ಲದೆ, ರೋಗಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ.ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಭಾರತೀಯ ಕಮ್ಯೂನಿಷ್ಟ್ ಪಕ್ಷದ ಮುಖಂಡ ಲಕ್ಷ್ಮಣಾಚಾರ್ ಒತ್ತಾಯಿಸಿದ್ದಾರೆ.
ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ವೈಧ್ಯರಿಲ್ಲದ ಸಂದರ್ಭದಲ್ಲಿ ನಮ್ಮ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಡಾ|ರವಿಯವರನ್ನು ಬಣಕಲ್ ಆಸ್ಪತ್ರೆಯಿಂದ ಕಳಸ ಆಸ್ಪತ್ರೆಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿತ್ತು. ಬಣಕಲ್ ಆಸ್ಪತ್ರೆಯಲ್ಲೂ ಇವರ ನಡವಳಿಕೆ ಸರಿ ಇರಲಿಲ್ಲ. ಹಲವಾರು ದೂರುಗಳು ಕೇಳಿ ಬರುತ್ತಿದ್ದವು ಆದ್ದರಿಂದ ಅವರನ್ನು ಕಳಸಕ್ಕೆ ನಿಯೋಜನೆ ಮಾಡುವುದು ಬೇಡ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೂ ಅವರನ್ನು ಕಳಸ ಆಸ್ಪತ್ರೆಗೆ ತಾಲ್ಲೂಕು ವೈದ್ಯಾದಿಕಾರಿಗಳು ನೇಮಕ ಮಾಡಿದ್ದರು.
ಆದರೆ ಕಳಸ ಆಸ್ಪತ್ರೆಯಲ್ಲಿಯೂ ಇವರು ಕುಡಿದು ಬಂದು ಗಲಾಟೆ ಮಾಡುವುದು ರೋಗಿಗಳ ಜೊತೆ ಅಸಭ್ಯವಾಗಿ ವರ್ತಿಸುವುದು ಮುಂದುವರೆದಿದೆ. ಕಳೆದ 20 ದಿನಗಳ ಹಿಂದೆ ರೋಗಿಯೊಬ್ಬರ ಬಳಿ ಗಲಾಟೆ ಮಾಡಿ ಹೊಡೆದಾಟಕ್ಕೆ ಮುಂದಾದಾಗ ಆಸ್ಪತ್ರೆಯ ಸಿಬ್ಬಂದಿಗಳು ಬಿಡಿಸಿ ಹೊರಗೆ ಕಳುಹಿದ್ದರು. ಹೊರಗಡೆಯೂ ಗಲಾಟೆ ಮಾಡಿ ರೋಗಿಯ ಮೇಲೆ ಕಲ್ಲು ಎತ್ತಿ ಹಾಕಲು ಮುಂದಾಗಿದ್ದಾರೆ. ಕಳೆದ ಒಂದು ವಾರಗಳ ಹಿಂದೆ ಆಸ್ಪತ್ರೆಗೆ ಔಷದಿ ಮಾರಾಟ ಮತ್ತು ಪ್ರಚಾರಕ್ಕೆ ಬಂದ ವ್ಯಕ್ತಿಯ ಪರ್ಸನ್ನು ತೆಗೆದು ಗಲಾಟೆ ರಂಪಾಟ ಮಾಡಿದ್ದಾರೆ. ಮಹಿಳಾ ರೋಗಿಗಳು ಬಂದಾಗ ಅವರ ಜೊತೆ ಅನುಚಿತವಾಗಿ ವರ್ತಿಸಿ ರಂಪಾಟ ಕೂಡ ನಡೆದಿದೆ. ಇದೆಲ್ಲ ಇವರ ಮಿತಿ ಮೀರಿದ ಮದ್ಯ ಸೇವನೆಯಿಂದ ನಡೆದಿರುತ್ತದೆ. ಇವರ ಈ ವರ್ತನೆಯಿಂದ ಯಾವ ರೋಗಿಯೂ ಕೂಡ ಕಳಸ ಆಸ್ಪತ್ರೆಗೆ ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಊರಿಗೆ ಕೆಟ್ಟ ಹೆಸರನ್ನು ತರುತ್ತಿದ್ದಾರೆ. ಇವರ ಕುಡಿತದಿಂದ ಆಗುವ ರಂಪಾಟದಿಂದ ದೊಡ್ಡ ಅನಾಹುತಗಳು ಆಗುವ ಮೊದಲು ಡಾ|ರವಿಯವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ಉತ್ತಮ ವೈದ್ಯರನ್ನು ನೇಮಿಸಿ ಎಂದು ತಮ್ಮ ದೂರಿನಲ್ಲಿ ಲಕ್ಷ್ಮಣಾಚಾರ್ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ, ಜಿಲ್ಲಾ ವೈದ್ಯರಿಗೆ, ತಾಲ್ಳು ವೈದ್ಯಾದಿಕಾರಿಗೆ, ಜಿಲ್ಲಾ ಪಂಚಾಯಿತಿ ಸದ್ಯರಿಗೆ, ತಾಲ್ಲೂಕು ಪಂಚಾಯಿತಿ ಸದಸ್ಯರಿಗೂ ಪತ್ರವನ್ನು ಬರೆಯಲಾಗಿದೆ ಎಂದು ತಿಳಿಸಿದ್ದಾರೆ.










